ಮಂಗಳೂರು: ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿ ಇಲಾಖೆಯ ಅಧೀನದಲ್ಲಿರುವ ಮಹತೋಭಾರ ಕುಕ್ಕೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕರ್ನಾಟಕ ಸರಕಾರದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಮತ್ತು ಸಭೆಯಲ್ಲಿ ಭಾಗವಹಿಸಿದರು. ಬೆಂಗಳೂರಿನ ಉದ್ಯಮಿ ಪುನೀತ್ ಇವರಿಂದ ಸೇವಾರೂಪದಲ್ಲಿ ನಿರ್ಮಾಣಗೊಳ್ಳಲಿರುವ ಆಶ್ಲೇಷ ಬಲಿಪೂಜಾ ಮಂದಿರದ ಗುದ್ದಲಿ ಪೂಜೆ ಹಾಗೂ ಶ್ರೀ ದೇವಳದ ವತಿಯಿಂದ ನೂತನವಾಗಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ದಾಸೋಹ ಭವನ, ದೇವಳದ ಸುತ್ತು ಪೌಳಿ, 800 ಕೊಠಡಿಗಳ ವಸತಿ ಗೃಹ, ನೂತನ ಪಾರಂಪರಿಕ ರಥ ಬೀದಿ ನಿರ್ಮಾಣದ ಯೋಜನೆಯ ಅಂತಿಮ ಹಂತದ ಮಂಜೂರಾತಿಗಳ ಸಭೆಗಾಗಿ ಸಚಿವರು ಆಗಮಿಸಿದರು.


ಸಭೆಯ ನಂತರದಲ್ಲಿ ಮಾತನಾಡಿದ ಸಚಿವ ರಾಮಲಿಂಗ ರೆಡ್ಡಿ, ಕುಕ್ಕೆ ಸುಬ್ರಹ್ಮಣ್ಯದ ಮಾಸ್ಟರ್ ಪ್ಲಾನ್ ವ್ಯವಸ್ಥೆಗಳು ಉದ್ದೇಶಿತ ರೀತಿಯಲ್ಲಿ ನಡೆದರೆ ಎರಡರಿಂದ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳುತ್ತದೆ. ಇಲ್ಲಿ ಹಣಕಾಸಿನ ಕೊರತೆಯಿಲ್ಲ.ಆಶ್ಲೇಷ ಬಲಿಪೂಜಾ ಮಂದಿರದ ನಿರ್ಮಾಣ, ಶ್ರೀ ದೇವಳದ ವತಿಯಿಂದ ನೂತನವಾಗಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ದಾಸೋಹ ಭವನ, ದೇವಳದ ಸುತ್ತು ಪೌಳಿ,ಸುಮಾರು 800 ಕೊಠಡಿಗಳ ವಸತಿ ಗೃಹ, ನೂತನ ಮತ್ತು ಪಾರಂಪರಿಕ ರೀತಿಯಲ್ಲಿ ನಿರ್ಮಾಣವಾಗಲಿರುವ ರಥ ಬೀದಿ ಯೋಜನೆ ಆದಷ್ಟು ಬೇಗನೇ ಪೂರ್ಣಗೊಳಿಸಲಾಗುತ್ತದೆ ಎಂದು ಅವರು ಹೇಳಿದರು. ಸುಬ್ರಹ್ಮಣ್ಯ ದೇಗುಲ ಮತ್ತು ಸಂಪುಟ ನರಸಿಂಹ ಸ್ವಾಮಿ ಮಠದ ನಡುವೆ ಇರುವ ವ್ಯಾಜ್ಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತಿದೆ. ದೇಗುಲದ ಎ ಮತ್ತು ಬಿ ಗ್ರೇಟ್ ಕಾರ್ಮಿಕರ ವೇತನ ಸದ್ಯದ ಪರಿಸ್ಥಿತಿಯಲ್ಲಿ ತೊಂದರೆಯಿಲ್ಲ ಆದರೆ ಸಿ ಗ್ರೇಡ್ ನೌಕರರ ವೇತನ ಪರಿಷ್ಕರಣೆ ಬಗ್ಗೆ ಚಿಂತಿಸಲಾವುದು ಎಂದು ಅವರು ಹೇಳಿದರು.