ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್‌ಎಎಫ್ (Special Action Force) ಪಡೆಗೆ ಮೊಟ್ಟಮೊದಲ ಟಾಸ್ಕ್ ನೀಡಲಾಗಿದ್ದು, ಮಂಗಳೂರು ಜೈಲಿನ ಕೋಮು ಸಂಘರ್ಷ ಹತ್ತಿಕ್ಕಲು ಭರ್ಜರಿ ಕಾರ್ಯಾಚರಣೆ ನಡೆಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಘರ್ಷ ಹತ್ತಿಕ್ಕಲು ನೂತನವಾಗಿ ರಚಿಸಲಾಗಿರುವ ಸ್ಪೆಷಲ್ ಆಕ್ಷನ್ ಫೋರ್ಸ್ (SAF) ಪಡೆ ತನ್ನ ಮೊಟ್ಟಮೊದಲ ಕಾರ್ಯಾಚರಣೆಯಾಗಿ ಮಂಗಳೂರು ಜಿಲ್ಲಾ ಕಾರಾಗೃಹದೊಳಗೆ ಪ್ರವೇಶಿಸಿದೆ. ಜೈಲಿನೊಳಗೆ ಹಿಂದೂ-ಮುಸ್ಲಿಂ ಕೈದಿಗಳ ನಡುವೆ ನಿರಂತರವಾಗುತ್ತಿದ್ದ ಗಲಾಟೆ ಮತ್ತು ಸಂಘರ್ಷಗಳನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇತ್ತೀಚೆಗೆ ಕಾರಾಗೃಹದ A ಮತ್ತು B ಬ್ಯಾರಕ್‌ಗಳಲ್ಲಿ ಹಿಂದೂ-ಮುಸ್ಲಿಂ ಕೈದಿಗಳ ನಡುವೆ ಹಲ್ಲೆ, ಕಿರಿಕ್, ಹಾಗೂ ದಾಂಧಲೆ ಪ್ರಕರಣಗಳು ಹೆಚ್ಚಾಗಿದ್ದು, ಪರಿಸ್ಥಿತಿ ಅತೀ ತೀವ್ರ ರೂಪ ಪಡೆದುಕೊಂಡಿತ್ತು. ಇದರಿಂದಾಗಿ ಜೈಲಿನಲ್ಲಿ ಕೋಮು ಸಂಘರ್ಷಗಳ ಸಾಧ್ಯತೆಯನ್ನು ನೋಡಿದ ಪೊಲೀಸರು, ತಕ್ಷಣದಂತೆ SAF ಪಡೆ ಬಳಸಲು ನಿರ್ಧರಿಸಿದ್ದಾರೆ.

ಜೈಲಿನೊಳಗೆ ಮೊಬೈಲ್ ಬಳಸುವಿಕೆ, ಬಾಹ್ಯ ಸಂಪರ್ಕ, ಹಾಗೂ ಸಂಘಟಿತ ಅಪರಾಧಿಗಳಿಗೆ ಹೊರಗಿನ ಜೊತೆಗಿನ ಸಂಪರ್ಕಗಳ ಬಗ್ಗೆ ತನಿಖೆಗೂ ಈಗ ಪ್ಲಾನ್ ಸಿದ್ದವಾಗಿದೆ. ಜೈಲಿನಲ್ಲಿ ನಡೆಯುತ್ತಿದ್ದ ಹಲವಾರು ಗಂಭೀರ ಅಪರಾಧ ಸ್ಕೆಚ್‌ಗಳು ಕಾರಾಗೃಹದಲ್ಲೇ ರೂಪುಗೊಳ್ಳುತ್ತಿದೆಯೆಂಬ ಅಂಶ ಕೂಡ ಬೆಳಕಿಗೆ ಬಂದ ಹಿನ್ನೆಲೆ, ಈ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸುವ ಕೆಲಸಕ್ಕೆ SAF ತೊಡಗಿಸಿಕೊಂಡಿದೆ. ಇದೊಂದು ಆರಂಭಿಕ ಹಂತದ ಕಾರ್ಯಾಚರಣೆ ಆಗಿದ್ದು, ಮುಂದಿನ ದಿನಗಳಲ್ಲಿ ಜೈಲಿನೊಳಗಿನ ಶಿಸ್ತು ಮತ್ತು ಕೋಮು ಸೌಹಾರ್ದತೆಯನ್ನು ಪುನಸ್ಥಾಪಿಸಲು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗಲಿದೆ.