ಕ್ರೈಂ
ಮಂಗಳೂರು: ದೇಶಾದ್ಯಂತ ನಡೆದಿದ್ದ ಸ್ಪೋಟಗಳಿಗೆ ಸಂಬಂಧಿಸಿದಂತೆ ಮಂಗಳೂರಿನ ಉಳ್ಳಾಲದಲ್ಲಿ ಬಾಂಬ್ ತಯಾರಿಕೆ ಮಾಡಿದ್ದ ಪ್ರಕರಣದ ವಿಚಾರಣೆ ಇದೀಗ 17 ವರ್ಷಗಳ ಬಳಿಕ ಮಂಗಳೂರು ನ್ಯಾಯಾಲಯದಲ್ಲಿ ಪ್ರಾರಂಭವಾಗಿದೆ.

2008ರ ಅಕ್ಟೋಬರ್ 4ರಂದು ಉಳ್ಳಾಲದ ಮುಕ್ಕಚ್ಚೇರಿ ಮತ್ತು ಚೆಂಬುಗುಡ್ಡೆ ಪ್ರದೇಶದಲ್ಲಿನ ಅಡಗುತಾಣಗಳ ಮೇಲೆ ಮುಂಬಯಿ ಎಟಿಎಸ್ ಮತ್ತು ಮಂಗಳೂರು ಪೊಲೀಸರು ಜಂಟಿ ದಾಳಿ ನಡೆಸಿದ್ದರು. ಆ ವೇಳೆ ದೇಶದ ವಿವಿಧೆಡೆ ಬಾಂಬ್ ಸ್ಪೋಟ ನಡೆಸಲು ಉದ್ದೇಶಿಸಿದ್ದ ಬಾಂಬ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಯಾಸೀನ್ ಭಟ್ಕಳ್ನ್ನು ತಿಹಾರ್ ಕೇಂದ್ರ ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮಂಗಳೂರು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. ಆತನು ಹಲವು ವರ್ಷಗಳಿಂದ ತಿಹಾರ್ ಜೈಲಿನಲ್ಲಿ ಶಿಕ್ಷಾ ಖೈದಿಯಾಗಿದ್ದ ಕಾರಣ, ಈವರೆಗೆ ನ್ಯಾಯಾಲಯದ ಮುಂದೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಪ್ರಕರಣ ಸಂಬಂಧ ಜಾರಿಯಾದ ತನಿಖೆಯಲ್ಲಿ ಒಟ್ಟು 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ದಾಳಿ ವೇಳೆ ಜಂಟಿ ಕಾರ್ಯಾಚರಣೆ ನಡೆಸಿದ ಮುಂಬಯಿ ಎಟಿಎಸ್ ಹಾಗೂ ಮಂಗಳೂರು ಪೊಲೀಸರು ಈ ಭಯೋತ್ಪಾದನಾ ಸಂಚು ಬಯಲಿಗೆಳೆದಿದ್ದರು. ಉಳ್ಳಾಲ ಠಾಣೆ ಪೊಲೀಸರು ತಿಹಾರ್ ಜೈಲಿನ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಯಾಸೀನ್ ಭಟ್ಕಳ್ನನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದಲ್ಲಿ ಹಾಜರುಪಡಿಸುವ ವ್ಯವಸ್ಥೆ ಮಾಡಿದ್ದಾರೆ..
ಇದೀಗ ಪ್ರಕರಣ ಮಂಗಳೂರು ನ್ಯಾಯಾಲಯದಲ್ಲಿ ಮುಂದುವರೆದಿದೆ