ಮಂಗಳೂರು: ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ಘಟಕದಲ್ಲಿ ಸಂಭವಿಸಿದ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ ಸಂಸ್ಥೆಯ ಆಡಳಿತ ಮಂಡಳಿ 1.20 ಕೋಟಿ ಪರಿಹಾರ ಘೋಷಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರ ಮಧ್ಯಸ್ಥಿಕೆಯಿಂದ ಈ ಪರಿಹಾರ ದೊರೆತಿದೆ.

ನಿನ್ನೆ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕೊಳ್ಳೇಗಾಲ ಪ್ರವಾಸದಿಂದ ಮಂಗಳೂರಿಗೆ ಧಾವಿಸಿದ ಸಚಿವರು, ಜಿಲ್ಲಾಧಿಕಾರಿಗಳೊಂದಿಗೆ ಎಂಆರ್ಪಿಎಲ್ ಘಟಕಕ್ಕೆ ಭೇಟಿ ನೀಡಿ ಘಟನಾ ಸ್ಥಳ ಪರಿಶೀಲಿಸಿದರು. ಬಳಿಕ ಸಂಸ್ಥೆಯ ಉನ್ನತಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಮೊತ್ತದ ಪರಿಹಾರ ಹಾಗೂ ಮೃತರ ಸಹೋದರನಿಗೆ ಕಾಯಂ ಉದ್ಯೋಗ ನೀಡಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಿದ್ದರು. ಸಚಿವರ ಸೂಚನೆಗೆ ತಕ್ಷಣ ಸ್ಪಂದಿಸಿರುವ ಎಂಆರ್ಪಿಎಲ್, ಪರಿಹಾರ ಮೊತ್ತ ಘೋಷಿಸಿರುವುದರ ಜೊತೆಗೆ ಕುಟುಂಬದ ಸದಸ್ಯರಿಗೆ ಕಾಯಂ ಉದ್ಯೋಗ ನೀಡುವ ಪ್ರಸ್ತಾವನೆಯನ್ನು ಪರಿಶೀಲನೆಗೆ ಕೈಗೆತ್ತಿಕೊಂಡಿದೆ.












