ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ (MCC) ನಕಲಿ ಉದ್ದಿಮೆ ಪರವಾನಿಗೆ ಮತ್ತು ಆಸ್ತಿ ತೆರಿಗೆ ಸರ್ಟಿಫಿಕೇಟ್ಗಳ ಜಾಲದಿಂದ ಉದ್ಯಮಿಗಳು ಮತ್ತು ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಸುಮಾರು 4,500 ಉದ್ಯಮ ಪರವಾನಿಗೆಗಳ ನವೀಕರಣದಲ್ಲಿ ನಕಲಿ ಪ್ರಮಾಣಪತ್ರಗಳ ಸೃಷ್ಟಿ ನಡೆದಿದೆ ಎಂಬ ಗಂಭೀರ ಅನುಮಾನ ಎದ್ದಿದ್ದು, ಈ ಸಂಬಂಧ ಪಾಲಿಕೆ ವ್ಯಾಪ್ತಿಯಲ್ಲಿ ಮಹತ್ವದ ತನಿಖೆ ಆರಂಭವಾಗಿದೆ.

ಪಾಲಿಕೆ ನೀಡುವ ಅಸಲಿ ಸರ್ಟಿಫಿಕೇಟ್ ಮಾದರಿಯಂತೆಯೇ ತಂತ್ರಜ್ಞಾನ ಬಳಸಿ ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸಲಾಗಿದೆ. ಈ ನಕಲಿ ದಾಖಲೆಗಳಲ್ಲಿ QR ಕೋಡ್ ಕೂಡ ಅಸಲಿ ಸರ್ಟಿಫಿಕೇಟ್ನಿಂದ ನಕಲು ಮಾಡಲಾಗಿದೆ. ಸ್ಕ್ಯಾನ್ ಮಾಡಿದಾಗ ಸರಿಯಾದ ವಿವರಗಳು ತೋರಿದರೂ, ನವೀಕರಣದ ದಿನಾಂಕ ಬದಲಾಯಿಸಿಕೊಂಡಿರುವುದು ವಂಚನೆ ಬಹಿರಂಗವಾಗಲು ಕಾರಣವಾಗಿದೆ.

ದೇವಂಗ್ ಪಾಟೀಲ್ ಹಾಗೂ ಬಾಲಕೃಷ್ಣ ಎಂಬವರು MCC ಕಚೇರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಈ ಇಬ್ಬರಿಗೆ ನಕಲಿ ಉದ್ದಿಮೆ ಪರವಾನಿಗೆ ಮತ್ತು ಆಸ್ತಿ ತೆರಿಗೆ ಪ್ರಮಾಣಪತ್ರವನ್ನು ನೀಡಿದ ಏಜೆಂಟ್ ಪೃಥ್ವಿರಾಜ್ ಶೆಟ್ಟಿ ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿದೆ. MCC ಅಧಿಕಾರಿಗಳು ಈ ನಕಲಿ ಪ್ರಮಾಣಪತ್ರಗಳನ್ನು ಪರಿಶೀಲಿಸಿದಾಗ ಅವು ಸಂಪೂರ್ಣ ನಕಲಿ ಎಂದು ದೃಢಪಟ್ಟಿದೆ.
ಈ ಬಗ್ಗೆ ಪಾಲಿಕೆ ಕಮಿಷನರ್ ರವಿಚಂದ್ರ ನಾಯಕ್ ಪ್ರತಿಕ್ರಿಯೆ ನೀಡಿದ್ದು, ಈ ವಂಚನೆಯ ಕುರಿತು ನಾವು ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಎಲ್ಲಾ ಇಲಾಖೆಗಳಿಗೂ ಪರಿಶೀಲನೆ ಮಾಡಲು ಸೂಚಿಸಲಾಗಿದೆ. ನವೀಕರಣ ಬಾಕಿಯಿರುವ 4,500 ಉದ್ಯಮ ಪರವಾನಿಗೆಗಳಲ್ಲಿ ನಕಲಿ ದಾಖಲೆಗಳ ಅನುಮಾನವಿದೆ. ಉದ್ಯಮಿಗಳು ತಮ್ಮ ಪರವಾನಿಗೆಗಳನ್ನು ತಕ್ಷಣ ಮರುಪರಿಶೀಲನೆ ಮಾಡಿಸಿಕೊಳ್ಳಬೇಕು. ಮಧ್ಯವರ್ತಿಗಳ ಮೂಲಕ ಕೆಲಸ ಮಾಡಬಾರದು ಎಂದಿದ್ದಾರೆ.