ಕಾಲೇಜು ಕ್ಯಾoಪಸ್
ಮಂಗಳೂರು: ಡ್ರಗ್ ಅಡಿಕ್ಟ್ ಮಕ್ಕಳ ಪೋಷಕರಿಬ್ಬರು ಪೊಲೀಸರಿಗೆ ನೀಡಿದ ಮಾಹಿತಿ ಆಧಾರದಲ್ಲಿ ಕೂಲಂಕುಷವಾಗಿ ತನಿಖೆ ನಡೆಸಿದ ಮಂಗಳೂರು ಸೆನ್ ಪೊಲೀಸರು ಇನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡ್ತಿದ್ದ ಜಾಲದ ಐವರನ್ನು ಬಂಧಿಸಿದ್ದಾರೆ.

ಮಂಗಳೂರು ಹೊರವಲಯದ ಪಡುಶೆಡ್ಡೆ ಗ್ರಾಮದ ಹಾಲಾಡಿ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ವೇಳೆ ಸೆನ್ ಕ್ರೈಂ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ 5.759 ಕೆ.ಜಿ. ನಿಷೇಧಿತ ಗಾಂಜಾ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ತುಷಾರ್ ಅಲಿಯಾಸ್ ಸೋನು (21) – ಅಡು ಮರೋಳಿ, ಬಿಕರ್ನಕಟ್ಟೆ, ಧನ್ವಿ ಶೆಟ್ಟಿ (20) – ನಾಗುರಿ, ಸಾಗರ್ ಕರ್ಕೇರಾ (19) – ಜಲ್ಲಿಗುಡ್ಡೆ, ವಿಕಾಸ್ ಥಾಪ ಅಲಿಯಾಸ್ ಪುಚ್ಚಿ (23) – ಶಕ್ತಿನಗರ, ವಿಘ್ನೇಶ್ ಕಾಮತ್ (24) – ಅಳಕೆ ಬಂಧಿತರು. ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಬಂಧಿತರು ಪಡುಶೆಡ್ಡೆ ಹಾಲಾಡಿ ಎಂಬಲ್ಲಿ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ ಪ್ರತಿಯೊಬ್ಬರ ಬಳಿ 1 ಕೆ.ಜಿ. ಗಿಂತಲೂ ಹೆಚ್ಚು ಪ್ರಮಾಣದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಒಟ್ಟು 5.759 ಕೆ.ಜಿ. ಗಾಂಜಾದ ಮೌಲ್ಯ ರೂ.5,20,000 ಆಗಿದ್ದು, 06 ಮೊಬೈಲ್ ಫೋನ್ಗಳು, 1 ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಬಂಧಿತರು ಮಂಗಳೂರು ನಗರದಲ್ಲಿ ಚಿಕ್ಕಚಿಕ್ಕ ಪ್ಯಾಕೆಟ್ಗಳಲ್ಲಿ ಗಾಂಜಾವನ್ನು ಪ್ಯಾಕ್ ಮಾಡಿ ಪ್ರತಿ ಪ್ಯಾಕೆಟ್ನ್ನು ರೂ.1000ಕ್ಕೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಪೋಷಕರ ಮಾಹಿತಿ ಆಧಾರವಾಗಿ ದಾಳಿ: ಕಮಿಷನರ್ ಸುಧೀರ್ ರೆಡ್ಡಿ
ಸೆನ್ ಕ್ರೈಂ ಠಾಣೆಗೆ ಇಬ್ಬರು ಪೋಷಕರು ಬಂದು ತಮ್ಮ ಮಕ್ಕಳ ಡ್ರಗ್ ಅಡಿಕ್ಟ್ ಬಗ್ಗೆ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಯಿತು. ಇದರ ಮೂಲಕ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಜಾಲವೊಂದು ಪತ್ತೆಯಾಗಿದೆ. ಒಂದು ಪೋಷಕರ ದೂರಿನಿಂದ ಇಂತಹ ಜಾಲ ಭೇದಿಸಲಾಗಿದೆ. ಹೀಗಾಗಿ ಜನ ಸಾಮಾನ್ಯರು ಸಹಕರಿಸಿದರೆ ಮಂಗಳೂರಿನಲ್ಲಿ ಮಾದಕ ದಂಧೆಗೆ ಸಂಪೂರ್ಣ ವಿರಾಮ ನೀಡಲು ಸಾಧ್ಯ. ಡ್ರಗ್ ಅಡಿಕ್ಟ್ ಆದವರು ಸಂತ್ರಸ್ತರು. ಆದರೆ ಅವರಿಗೆ ಮಾದಕ ವಸ್ತು ಪೂರೈಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ಮಾಹಿತಿ ಇದ್ದರೂ ನಮ್ಮನ್ನು ಸಂಪರ್ಕಿಸಿ ಎಂದು ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.