ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ರಥಬೀದಿಯ ಅವಿವಾಹಿತ ಯುವತಿ ಸಿಂಧು ಶೆಟ್ಟಿ ಮೆದುಳಿನ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದು, ಯುವತಿ ಕೋಮಾಗೆ ಜಾರಿದ ಹಿನ್ನೆಲೆಯಲ್ಲಿ ಮನೆಯವರು ಅಂಗಾಂಗ ದಾನ ಮಾಡುವ ಮೂಲಕ ಮತ್ತೊಂದಿಷ್ಟು ಜೀವಗಳಿಗೆ ಬದುಕು ಕರುಣಿಸುವ ಮೂಲಕ ಸಾರ್ಥಕತೆ ಮರೆದಿದ್ದಾರೆ.

ಮೃತ ಸಿಂಧು ಶೆಟ್ಟಿ ಸುಳ್ಯದ ರಥಬೀದಿ ನಿವಾಸಿ ಮಮತಾ ಶೆಟ್ಟಿ ಅವರ ಪುತ್ರಿಯಾಗಿದ್ದು, ಸುಳ್ಯ ಸರ್ಕಾರಿ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದ್ದ ಸಿಂಧು, ಪುತ್ತೂರು ಆದರ್ಶ ವಿವಿದೋದ್ದೇಶ ಸಹಕಾರಿ ಬ್ಯಾಂಕಿನಲ್ಲಿ ಉದ್ಯೋಗದಲ್ಲಿದ್ದರು. ಡಿ.16ರಂದು ಬ್ಯಾಂಕ್ ಕೆಲಸ ಮುಗಿಸಿ ಬಸ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಸಿಂಧು ಅವರಿಗೆ ತೀವ್ರ ತಲೆನೋವು ಕಾಣಿಸಿಕೊಂಡಿತು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಬಳಿಕ ಸುಳ್ಯದ ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.

ವೈದ್ಯರ ಪರೀಕ್ಷೆಯಲ್ಲಿ ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆ ನಂತರ ಕೆಲಕಾಲ ಪ್ರಜ್ಞೆಗೆ ಬಂದಿದ್ದರೂ, ನಂತರ ಕೋಮಾಗೆ ಜಾರಿದ್ದರು. ಬಳಿಕ ಮೆದುಳು ಸಂಪೂರ್ಣವಾಗಿ ಕಾರ್ಯನಿರ್ವಹಣೆ ನಿಲ್ಲಿಸಿರುವುದು ದೃಢಪಟ್ಟಿತು.
ಅಂಗಾಂಗ ದಾನ – ಮಾನವೀಯ ನಿರ್ಧಾರ!
ಮಗಳ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ತಾಯಿ ಮಮತಾ ಶೆಟ್ಟಿ ಅವರು ಕುಟುಂಬಸ್ಥರೊಂದಿಗೆ ಚರ್ಚಿಸಿ ಅಂಗಾಂಗ ದಾನ ಮಾಡುವ ನಿರ್ಧಾರ ಕೈಗೊಂಡರು. ಅದರಂತೆ ಸಿಂಧು ಅವರ ಅಂಗಾಂಗಗಳನ್ನು ಮಂಗಳೂರು ಮತ್ತು ಮೈಸೂರಿನ ವಿವಿಧ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು, ಮೈಸೂರಿನ ಅಪೋಲೋ ಆಸ್ಪತ್ರೆ, ಮಂಗಳೂರಿನ ಎ.ಜೆ ಆಸ್ಪತ್ರೆ, ಕೆ.ಎಂ.ಸಿ ಹಾಗೂ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಅಂಗಾಂಗಗಳನ್ನು ಸಾಗಿಸಲಾಗಿದೆ.
ಅಂಗಾಂಗ ದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಿಂಧು ಅವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಸಿದ್ದಕಟ್ಟೆಯಲ್ಲಿರುವ ಮಾವ ರಾಜೇಶ್ ಅವರ ಮನೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಶ್ರಮಜೀವಿ ತಾಯಿಯ ಪ್ರೀತಿಯ ಮಗಳು!
ಮೃತ ಸಿಂಧು ಅವರು ತಾಯಿ, ಸಹೋದರಿಯನ್ನು ಅಗಲಿದ್ದಾರೆ. ತಾಯಿ ಮಮತಾ ಅವರು ಶ್ರಮ ಜೀವಿ ಮಹಿಳೆಯಾಗಿದ್ದು, ಸುಳ್ಯದ ಶಾಂತಿನಗರ, ಜಟ್ಟಿಪ್ಪಳ್ಳ ಗಳಲ್ಲಿ ಪತಿ, ಮಕ್ಕಳೊಂದಿಗೆ ವಾಸ್ತವ್ಯದಲ್ಲಿದ್ದರು. ಆದರೆ ತಾಯಿಯನ್ನು ಸಲಹಬೇಕಾದ ಮಗಳೇ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ. ಗಂಡನಿಲ್ಲದೆ ಕೂಲಿ ಮಾಡಿ ಅತ್ಯಂತ ಕಷ್ಟದ ಬದುಕು ಸಾಗಿಸುವ ಬಡ ಕುಟುಂಬದ ತಾಯಿಯೊಬ್ಬಳು ದುಃಖದ ಸನ್ನಿವೇಶದಲ್ಲೂ ಮಗಳ ಅಂಗಾಂಗ ದಾನ ಮಾಡಿ ಹಲವರ ಬದುಕಿಗೆ ಜೀವ ತುಂಬುವ ಕಾರ್ಯವನ್ನು ತಾಯಿ ಮಮತಾ ಮಾಡಿದ್ದಾರೆ. ಸಿಂಧು ಎಂಬ ಮಗಳನ್ನು ಅಂಗಾಂಗ ದಾನ ಮಾಡಿ ಅನೇಕರಲ್ಲಿ ಜೀವಂತವಾಗಿಸಿದ ಮಮತಾ ಅವರು ಮಾದರಿಯಾಗಿದ್ದಾರೆ. ಸಮಾಜಕ್ಕೆ ಮಾದರಿಯಾದ ದುಃಖ ತಪ್ತ ತಾಯಿಗೆ ಸಮುದಾಯದ ಸಾಂತ್ವನದ ಮಾತುಗಳು ಬೇಕಿದೆ.
