ಡಿಜಿಟಲ್ ಟೆಕ್

ಮಂಗಳೂರು: ದೇಶಾದ್ಯಂತ ನೂರಾರು ಜನರಿಗೆ ಸಾಲದ ಹೆಸರಿನಲ್ಲಿ ಕೋಟಿ ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಮಂಗಳೂರಿನ ಐಷಾರಾಮಿ ವಂಚಕ ರೋಹನ್ ಸಲ್ಡಾನಾ (45) ಎಂಬಾತ ಪೊಲೀಸ್ ಅತಿಥಿಯಾಗಿದ್ದಾನೆ.

ವಂಚನೆ ಮಾಸ್ಟರ್ಮೈಂಡ್ ರೋಹನ್ ತನ್ನನ್ನು ಉದ್ಯಮಿಯೆಂದು ಬಿಂಬಿಸಿ, ಬಹುಮಟ್ಟದ ಉದ್ಯಮಿಗಳು ಹಾಗೂ ಐಷಾರಾಮಿ ವ್ಯಕ್ತಿಗಳೇ ಈತನ ಟಾರ್ಗೆಟ್ ಆಗಿದ್ದರು. ಬಹುಕೋಟಿ ಸಾಲ ನೀಡುತ್ತೇವೆ ಎಂಬ ಆಮಿಷ ಒಡ್ಡಿ ನಂಬಿಕೆ ಬೆಳೆಸುತ್ತಿದ್ದ ಈತನ ಜಪ್ಪಿನಮೊಗರುನ ಐಷಾರಾಮಿ ಬಂಗಲೆಯಲ್ಲೇ ವ್ಯವಹಾರ ನಡೆಸುತ್ತಿದ್ದ. ಪ್ರತಿ ವ್ಯವಹಾರ 5 ಕೋಟಿ ರಿಂದ 100 ಕೋಟಿ ರೂ.ವರೆಗೆ ಇತ್ತು ಎನ್ನಲಾಗಿದೆ. ಮೊದಲಿಗೆ ಸಾಲ ವ್ಯವಹಾರದ ಮಾತುಕತೆ ನಂತರ 5-10 ಕೋಟಿ ರೂ. ಸ್ಟ್ಯಾಂಪ್ ಡ್ಯೂಟಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ನಗದು ರೂಪದಲ್ಲಿ ಈತನಿಗೆ ಹಣ ನೀಡಿದ ಉದ್ಯಮಿಗಳು ಮೋಸಕ್ಕೆ ತುತ್ತಾಗಿದ್ದಾರೆ. ಹಣ ಪಡೆದು ನಾನಾ ನೆಪ ಹೇಳಿ ಸಂಪರ್ಕ ತಪ್ಪಿಸುತ್ತಿದ್ದ ವಂಚಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಕಳೆದ ಮೂರು ತಿಂಗಳಲ್ಲಿ 45 ಕೋಟಿ ರೂ. ವ್ಯವಹಾರ ಮಾಡಿದ್ದ ರೋಹನ್, ಇದಕ್ಕೆ ಹಿಂದಿನ ವರ್ಷಗಳ ವಂಚನೆ ಸೇರಿಸಿ ಒಟ್ಟು 200 ಕೋಟಿ ರೂ.ಗೆ ಮೀರಿದ ವಂಚನೆಗೆ ಕಾರಣನಾಗಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಉದ್ಯಮಿಯೊಬ್ಬರು ನೀಡಿದ ದೂರಿನ ಹಿನ್ನಲೆಯಲ್ಲಿ ಪೊಲೀಸರು ತನಿಖೆ ನಡೆಸಿ ರೋಹನ್ ಸಲ್ಡಾನಾನನ್ನು ಬಂಧಿಸಿದ್ದಾರೆ. ಈತನ ವಿರುದ್ಧ ಇನ್ನೂ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬರಬಹುದೆಂಬ ನಿರೀಕ್ಷೆಯಿದೆ.

ಈತನ ಐಶಾರಾಮಿ ಸಾಮ್ರಾಜ್ಯ ಕಂಡು ಪೊಲೀಸರೇ ಶಾಕ್!
ಇನ್ನು ಈ 200 ಕೋಟಿ ವಂಚಕನ ಸಾಮ್ರಾಜ್ಯ ಕಂಡು ಮಂಗಳೂರು ಪೊಲೀಸರು ಶಾಕ್ ಆಗಿದ್ದಾರೆ. ಉದ್ಯಮಿಗಳನ್ನ ಜಾಲಕ್ಕೆ ಬೀಳಿಸಲು ಐಶಾರಾಮಿ ಅರಮನೆಯ ಖೆಡ್ಡಾ ತೋಡಿದ್ದ ಈತನ ಮಂಗಳೂರಿನ ಜೆಪ್ಲಿನಮೊಗರು ಬಳಿಯ ಐಶಾರಾಮಿ ಮನೆ ಕಂಡು ಬೆಚ್ಚಿ ಬಿದ್ದಿದ್ದಾರೆ ಪೊಲೀಸರು. ರೋಹನ್ ಬಂಧನಕ್ಕೆ ತೆರಳಿದ್ದ ಸೆನ್ ಠಾಣೆಯ ಪೊಲೀಸರು ಶಾಕ್ ಆಗಿದ್ದಾರೆ. ರೋಹನ್ ನ ಐಶಾರಾಮಿ ಬಂಗಲೆಯಲ್ಲಿ ವಿದೇಶಿ ಮದ್ಯಗಳದ್ದೇ ಕಾರುಬಾರು ಇದ್ದು, ಇಡೀ ಮನೆಯನ್ನೇ ಕೋಟಿ ಮೌಲ್ಯದ ಮದ್ಯದ ಬಾಟಲಿಗಳಲ್ಲಿ ಸಿಂಗರಿಸಿದ್ದ ರೋಹನ್. ಜಗತ್ತಿನ ಎಲ್ಲಾ ಮೂಲೆಯ ಮದ್ಯದ ಬಾಟಲಿಗಳು ಫುಲ್ ಸ್ಟಾಕ್ ಆಗಿದ್ದು, ಅರಮನೆ ಮಾದರಿಯಲ್ಲಿ ಮನೆಯನ್ನೇ ರೆಡಿ ಮಾಡಿಕೊಂಡಿದ್ದ. ಇಡೀ ಮನೆಯಲ್ಲಿ ಸೀಕ್ರೆಟ್ ರೂಮ್ ಇಟ್ಟುಕೊಂಡು ಹೈ ಸೆಕ್ಯುರಿಟಿ ವಾಸ ಮಾಡ್ತಿದ್ದ ಈತ, ಹೈ ಟೆಕ್ ಸಿಸಿ ಕ್ಯಾಮಾರ, ರಿಮೋಟ್ ಕಂಟ್ರೋಲ್ ಡೋರ್ ಸಿಸ್ಟಮ್ ಅಳವಡಿಸಿದ್ದ. ಯಾರಾದರೂ ಬಂದಾಗ ಸಿಸಿಟಿವಿ ನೋಡಿ ಅಲರ್ಟ್ ಆಗಿ ಸೀಕ್ರಿಟ್ ರೂಂ ಸೇರಿಕೊಳ್ಳುವ ರೋಹನ್, ಪೊಲೀಸರ ಆಗಮನದ ವೇಳೆಯೂ ಸೀಕ್ರೇಟ್ ರೂಂ ಸೇರಿದ್ದ. ಮಲೇಷಿಯಾ ಮೂಲದ ಯುವತಿಯನ್ನ ಜೊತೆಗೆ ಇಟ್ಟುಕೊಂಡಿದ್ದ ಈತ, ಪೊಲೀಸರು ಬಂದಾಗ ರೋಹನ್ ಇಲ್ಲ ಎಂದಿದ್ದ ಮಲೇಷಿಯನ್ ಯುವತಿ. ಆದರೆ ಅನುಮಾನ ಬಂದು ಇಡೀ ಮನೆ ತಡಕಾಡಿದ್ದ ಪೊಲೀಸರು ಆಗಲೂ ಎಲ್ಲೂ ಪತ್ತೆಯಾಗದೇ ಇದ್ದಾಗ ಸೀಕ್ರೆಟ್ ರೂಂ ಬಗ್ಗೆ ಅನುಮಾನ ಮೂಡಿ, ವರ್ಡ್ ರೋಬ್ ಮಾದರಿಯಲ್ಲಿದ್ದ ಬಾಗಿಲು ಒಡೆದಾಗ ಸಿಕ್ಕಿ ಬಿದ್ದಿದ್ದಾನೆ.