ಮಂಗಳೂರು: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನಡೆದ ‘ಹಫ್ತಾ ವಸೂಲಿ’ ಮತ್ತು ಹಲ್ಲೆ ಪ್ರಕರಣದ ಕುರಿತಾಗಿ ಇದೀಗ ಪೊಲೀಸ್ ಇಲಾಖೆ ಗಂಭೀರ ಕ್ರಮ ಕೈಗೊಂಡಿದೆ. ಜೈಲಿನೊಳಗೆ ಸಹ ಖೈದಿಗಳ ಮೇಲೆ ಹಲ್ಲೆ ಮಾಡಿ ಹಣಕ್ಕೆ ಬೆದರಿಸುತ್ತಿದ್ದ ಆರೋಪಿಗಳ ವಿರುದ್ಧ ಈಗ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೆ-ಕೋಕಾ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಧನುಷ್ ಭಂಡಾರಿ @ ಧನು, ದಿಲೇಶ್ ಬಂಗೇರ @ ದಿಲ್ಲು, ಲಾಯಿ ವೇಗಸ್ @ ಲಾಯಿ ಹಾಗೂ ಸಚಿನ್ ತಲಪಾಡಿ ವಿರುದ್ದ ಕೋಕಾ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ನಾಲ್ವರು ಖೈದಿಗಳು ವಿಚಾರಣಾಧೀನ ಕೈದಿ ಮಿಥುನ್ ಮೇಲೆ ಜುಲೈ 12ರಂದು ಜೈಲಿನಲ್ಲೇ ಹಲ್ಲೆ ನಡೆಸಿದ ಆರೋಪವಿದೆ. ಜೈಲು ಸಿಬ್ಬಂದಿಯ ಕಣ್ತಪ್ಪಿಸಿ ಈ ಕೃತ್ಯ ಎಸಗಲಾಗಿದೆ. ನಂತರ ಮಿಥುನ್‍ಗೆ ₹50,000 ಹಣ ನೀಡುವಂತೆ ಬೆದರಿಕೆ ಹಾಕಲಾಗಿತ್ತು. ಹಣ ನೀಡದಿದ್ದರೆ ಕೊಲ್ಲುವುದಾಗಿ ತೀವ್ರ ಧಮಕಿ ನೀಡಲಾಗಿತ್ತಂತೆ. ಭೀತಿಗೆ ಒಳಗಾದ ಮಿಥುನ್, ಜೈಲಿನ ಫೋನ್ ಬೂತ್‌ನಿಂದ ತನ್ನ ಪತ್ನಿಗೆ ಕರೆ ಮಾಡಿ ಘಟನೆ ತಿಳಿಸಿದ್ದಾನೆ. ಬಳಿಕ ಮಿಥುನ್ ಪತ್ನಿ, ಸಚಿನ್ ನೀಡಿದ ಎರಡು ಫೋನ್ ಪೇ ನಂಬರ್‌ಗಳಿಗೆ ತಲಾ ₹10,000ಹಾಕಿರುವುದು ಈಗ ತಿಳಿದುಬಂದಿದೆ. ಈ ಆರೋಪಿಗಳ ವಿರುದ್ಧ ಈಗ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾಯ್ದೆಯಡಿಯಲ್ಲಿ ಕಡಿಮೆಗಿಂತ ಕಡಿಮೆ 5 ವರ್ಷಗಳ ಶಿಕ್ಷೆ ವಿಧಿಸಲು ಅವಕಾಶವಿದ್ದು, ಅಪರಾಧ ಗಂಭೀರವಾಗಿದ್ದರೆ ಜೀವಾವಧಿ ಶಿಕ್ಷೆಗೂ ಅವಕಾಶವಿದೆ.
ಗ್ಯಾಂಗ್ ಸಂಪರ್ಕವಿದ್ದರೂ ಜೈಲು ಖಚಿತ: ಕಮಿಷನರ್ ಎಚ್ಚರಿಕೆ!
ಕೋಕಾ ಕಾಯಿದೆ ಜಾರಿ ಸಂಬಂಧಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತೀವ್ರ ಎಚ್ಚರಿಕೆ ನೀಡಿದ್ದಾರೆ. ಒಬ್ಬ ವ್ಯಕ್ತಿ ಎರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ, ಅವನು ಮೂರನೇ ಪ್ರಕರಣದಲ್ಲಿ ಭಾಗಿಯಾದರೆ ಮಾತ್ರ ನಾವು ಕೆ-ಕೋಕಾ ಅಡಿಯಲ್ಲಿ ಪ್ರಕರಣ ದಾಖಲಿಸುತ್ತೇವೆ. ಈ ಕಾಯ್ದೆಯಡಿಯಲ್ಲಿ ಕನಿಷ್ಠ ಐದು ವರ್ಷಗಳ ಶಿಕ್ಷೆ ಇದೆ. ಗಂಭೀರ ಸ್ಥಿತಿಯಲ್ಲಿ ಜೀವಾವಧಿ ಶಿಕ್ಷೆಗೂ ಅವಕಾಶ ಇದೆ. ಗ್ಯಾಂಗ್‌ನ ಸದಸ್ಯರಾಗಿರುವವರ ಮೇಲೂ ಕಾನೂನು ತೀವ್ರ ಕ್ರಮ ಕೈಗೊಳ್ಳುತ್ತದೆ. ಅವರ ಜೊತೆ ತಿರುಗಾಡುವವರಿಗೂ ಶಿಕ್ಷೆಯ ಸಾಧ್ಯತೆ ಇರುತ್ತದೆ. ಯಾರಾದರೂ ಗ್ಯಾಂಗ್ ಸದಸ್ಯರೊಂದಿಗೆ ಸಂಬಂಧ ಇಟ್ಟುಕೊಂಡರೆ ಜೈಲಿಗೆ ಹೋಗುವುದು ಖಚಿತ. ಹೊರಗೆ ಬರಲು ಸಾಧ್ಯವಿಲ್ಲ. ನಿಮ್ಮ ಸುತ್ತಲಿನವರ ಕುರಿತಾಗಿ ಎಚ್ಚರಿಕೆಯಿಂದಿರಿ. ತಪ್ಪಿತಸ್ಥರ ಸಂಪರ್ಕದಿಂದ ದೂರವಿರಿ. ಒಂದೊಂದೇ ತಪ್ಪು ನಿಮಗೆ ಗಂಭೀರ ಕಾನೂನು ಸಮಸ್ಯೆ ಉಂಟುಮಾಡಬಹುದು ಎಂದಿದ್ದಾರೆ.