ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ ಹೃದಯಾಘಾತದಿಂದ 85 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ತಿಳಿಸಿದ್ದಾರೆ.
ಜನವರಿಯಿಂದ ಜೂನ್ ತಿಂಗಳವರೆಗೆ, ಜಿಲ್ಲೆಯಲ್ಲಿ ಒಟ್ಟು 380 ಜನರಿಗೆ ಹೃದಯಾಘಾತ ಸಂಭವಿಸಿದ್ದು, ಅವರಲ್ಲಿ 85 ಮಂದಿ ಮೃತಪಟ್ಟಿದ್ದಾರೆ. ಮೃತರಾದವರಲ್ಲಿ 54 ಮಂದಿ ಪುರುಷರು ಮತ್ತು 31 ಮಂದಿ ಮಹಿಳೆಯರು ಎಂದು ಅಧಿಕೃತ ಮಾಹಿತಿ ಸ್ಪಷ್ಟಪಡಿಸಿದೆ.
ವಯೋವರ್ಗದ ವಿವರ ಹೀಗಿದೆ:
20 ರಿಂದ 30 ವರ್ಷದೊಳಗಿನವರು – 1 ಸಾವು
31 ರಿಂದ 40 ವರ್ಷ – 3 ಸಾವು
41 ರಿಂದ 50 ವರ್ಷ – 18 ಸಾವು
51 ರಿಂದ 60 ವರ್ಷ – 18 ಸಾವು
61 ವರ್ಷ ಮೇಲ್ಪಟ್ಟವರು – 45 ಸಾವು
ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಬೆಳೆಯುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದರೂ, ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಡಾ. ತಿಮ್ಮಯ್ಯ ಭರವಸೆ ನೀಡಿದರು. ಅವರು, “ಶಿಸ್ತಿನ ಆರೋಗ್ಯಕರ ಜೀವನಶೈಲಿ ಅನುಸರಿಸುವುದರಿಂದ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು,” ಎಂದು ಸಲಹೆ ನೀಡಿದರು.