ಪುತ್ತೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ನಾಯಕರ ಸಮ್ಮುಖದಲ್ಲಿ ಪುತ್ತೂರಿನಲ್ಲಿ ನಡೆದ ‘ಅಟಲ್ ವಿರಾಸತ್’ ಕಾರ್ಯಕ್ರಮಕ್ಕೆ ಅರುಣ್ ಪುತ್ತಿಲ ಗೈರು ಆಗಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಪಕ್ಷದ ಪ್ರಮುಖ ನಾಯಕರು ಹಾಜರಾಗಿದ್ದರೂ ಸಭೆಯಲ್ಲಿ ಭಾಗವಹಿಸದ ಪುತ್ತಿಲ ನಡೆ ಬಿಜೆಪಿ ಜೊತೆ ಮತ್ತೆ ಅಸಮಾಧಾನ ಮರುಕಳಿಸಿತಾ ಎನ್ನುವ ಪ್ರಶ್ನೆ ಹುಟ್ಟಿಸಿದೆ.

ಪಕ್ಷದಲ್ಲಿ ಸ್ಥಾನಮಾನ ಸಿಗದಿರುವುದು ಮುನಿಸಿನ ಕಾರಣ?

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಬಂಡಾಯ ಎದ್ದಿದ್ದ ಕಾರಣ ಪುತ್ತೂರಿನಲ್ಲಿ ಬಿಜೆಪಿ ಸೋಲು ಕಂಡಿತ್ತು. ನಂತರ ಪುತ್ತಿಲ–ವಿಜಯೇಂದ್ರ ನಡುವೆ ರಾಜಿ ಮಾತುಕತೆ ನಡೆದಿತ್ತು. ಉನ್ನತ ಹುದ್ದೆಯ ಭರವಸೆಯ ಹಿನ್ನೆಲೆ 2024ರ ಮಾರ್ಚ್ನಲ್ಲಿ ಅರುಣ್ ಪುತ್ತಿಲ ಮತ್ತೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಆದರೆ ಇದುವರೆಗೆ ಪಕ್ಷದಲ್ಲಿ ಯಾವುದೇ ಪ್ರಮುಖ ಜವಾಬ್ದಾರಿ ಅಥವಾ ಸ್ಥಾನಮಾನ ಸಿಕ್ಕಿಲ್ಲ. ಅರುಣ್ ಪುತ್ತಿಲರಿಗೆ ಹುದ್ದೆ ನೀಡಲು ಬಿಜೆಪಿ ಒಳಗೇ ಭಾರೀ ವಿರೋಧವಿರುವುದು ಪಕ್ಷದ ಒಳ ವಲಯದಲ್ಲಿ ಕೇಳಿಬರುತ್ತಿದೆಯಂತೆ. ಜಿಲ್ಲಾ ಮಟ್ಟದ ಮಹತ್ವದ ಕಾರ್ಯಕ್ರಮವಾಗಿದ್ದರೂ ಪುತ್ತಿಲ ಗೈರು ಆಗಿರುವುದು ಅವರ ಅಸಮಾಧಾನ ಇನ್ನೂ ನೀಂಗಿಲ್ಲವೆಂಬ ಸೂಚನೆ ನೀಡಿದೆ.
ಪುತ್ತೂರಿನಲ್ಲಿ ಒಗ್ಗಟ್ಟಿಗೆ ವಿಜಯೇಂದ್ರ ಕರೆ!

ಬಿಜೆಪಿ ರಾಜ್ಯಾಧ್ಯಕ್ಷ ವಿ. ವಿಜಯೇಂದ್ರ ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ಒಗ್ಗಟ್ಟಿನ ಸಂದೇಶ ರವಾನಿಸಿದ್ದಾರೆ. ಅರುಣ್ ಪುತ್ತಿಲ ಅವರ ಮುನಿಸಿನ ನಡುವೆಯೇ ನಡೆದ ಈ ಸಭೆಯಲ್ಲಿ, ವಿಜಯೇಂದ್ರ ಸಂಘಟನಾತ್ಮಕ ಮನೋಭಾವದ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ. ಮುಂದಿನ ಯಾವುದೇ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಬಿಜೆಪಿ ಗೆಲುವು ಸಾಧಿಸಲೇಬೇಕೆಂದು ವಿಜಯೇಂದ್ರ ಕರೆ ನೀಡಿದರು. ಕಾರ್ಯಕರ್ತರು ವ್ಯತ್ಯಾಸ ಮರೆತು, ಮುಖಂಡರು ವೈಮನಸ್ಸು ಬಿಟ್ಟು ಪಕ್ಷ ಬಲಪಡಿಸುವ ಕೆಲಸಕ್ಕೆ ಕೈ ಜೋಡಿಸಬೇಕು ಎಂದು ಅವರು ಸ್ಪಷ್ಟ ಸಂದೇಶ ನೀಡಿದರು.
ಪುತ್ತೂರಿನಲ್ಲಿ ಮತ್ತೆ ತಾರಕಕ್ಕೇರಿದ ಅರುಣ್ ಪುತ್ತಿಲ Vs ಬಿಜೆಪಿ ವಾರ್!

ಪುತ್ತೂರಿನ ರಾಜಕೀಯ ವಾತಾವರಣ ಮತ್ತೆ ಕುದಿಯುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪುತ್ತೂರು ಭೇಟಿ ಮುಗಿಸಿದ ಕೆಲವೇ ಗಂಟೆಗಳಲ್ಲೇ, ಅರುಣ್ ಪುತ್ತಿಲ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ರಾಜಕೀಯ ಸಂಚಲನ ಸೃಷ್ಟಿಸಿದ್ದಾರೆ. ಫೇಸ್ಬುಕ್, ವಾಟ್ಸಪ್ ಸೇರಿದಂತೆ ಹಲವು ವೇದಿಕೆಗಳಲ್ಲಿ ಪುತ್ತಿಲ ಪರ ಪೋಸ್ಟರ್ಗಳು ವೈರಲ್ ಆಗಿದೆ. ಬೆಂಬಲಿಗರು ಹಾಕಿರುವ ಪೋಸ್ಟ್ಗಳಲ್ಲಿ “ಮತ್ತೆ ಹೊಸ ಹುರುಪು ಉತ್ಸಾಹದೊಂದಿಗೆ… 2023 – #ಪುತ್ತೂರಿಗೆಪುತ್ತಿಲ 2028 – #ವಿಧಾನಸಭೆಗೆಪುತ್ತಿಲ”
ಎಂದು ಘೋಷಣೆ ಮಾಡಿದ್ದಾರೆ. ಇದೇ ಅಭಿಯಾನದ ಮೂಲಕ 2028ರ ಪುತ್ತೂರು ವಿಧಾನಸಭಾ ಕ್ಷೇತ್ರದ ‘ಅಭ್ಯರ್ಥಿ’ ಎಂಬ ಟ್ಯಾಗ್ನೊಂದಿಗೆ ಪುತ್ತಿಲರನ್ನು ಮುಂಚೂಣಿಗೆ ತರುತ್ತಿರುವುದು ಗಮನಾರ್ಹ.
