ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪೋಷಕರಿಗೆ ಎಚ್ಚರಿಕೆಗೆ ಕಾರಣವಾಗುವ ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ಮೊಬೈಲ್ ಫೋನ್ ಬಳಕೆಯಿಂದ ಶಾಲಾ ಮಕ್ಕಳಲ್ಲಿ ದೃಷ್ಟಿದೋಷ ಮತ್ತು ಮಾನಸಿಕ ಸಮಸ್ಯೆ ಗಂಭೀರವಾಗಿ ಹೆಚ್ಚುತ್ತಿರುವುದು ವೈದ್ಯಕೀಯ ಅಧ್ಯಯನದಿಂದ ಬಹಿರಂಗವಾಗಿದೆ.

ಜಿಲ್ಲಾ ಆರೋಗ್ಯ ಇಲಾಖೆ ನಡೆಸಿದ ಸಮಗ್ರ ಕಣ್ಣು ತಪಾಸಣೆಯಲ್ಲಿ ಒಟ್ಟು 1,45,951 ಮಕ್ಕಳನ್ನು ಪರೀಕ್ಷಿಸಲಾಗಿದ್ದು, ಅವರಲ್ಲಿ 4,398 ಮಕ್ಕಳಿಗೆ ದೃಷ್ಟಿದೋಷ ಕಂಡುಬಂದಿದೆ. ಇದರಲ್ಲಿ 2,066 ಮಕ್ಕಳಿಗೆ ಕಡ್ಡಾಯವಾಗಿ ಕನ್ನಡಕ ಧರಿಸುವ ಅಗತ್ಯವಿದೆ ಎಂದು ವರದಿ ಹೇಳುತ್ತದೆ.
ಜಿಲ್ಲೆಯ 1376 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳನ್ನು ಒಳಗೊಂಡ ಈ ತಪಾಸಣೆ ರಾಷ್ಟ್ರೀಯ ಅಂದತ್ವ ನಿವಾರಣಾ ಯೋಜನೆಯಡಿ ಕೈಗೊಳ್ಳಲಾಗಿತ್ತು. ಖಾಸಗಿ ಶಾಲೆಗಳು ಈ ಪರೀಕ್ಷೆಗೆ ಒಳಪಡಿಲ್ಲ. ಮಂಗಳೂರು ನಗರದಲ್ಲೇ 2 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ದೃಷ್ಟಿದೋಷ ಇರುವುದಾಗಿ ಡಾ. ಸುದರ್ಶನ, ಜಿಲ್ಲಾ ಅಂಧತ್ವ ನಿವಾರಣಾಧಿಕಾರಿ ಮಾಹಿತಿ ನೀಡಿದ್ದಾರೆ. ಈ ಪರೀಕ್ಷೆಯನ್ನು ನುರಿತ ನೇತ್ರ ತಜ್ಞರ ತಂಡದ ಸಹಾಯದಿಂದ ಅತ್ಯಂತ ವ್ಯಾಪಕವಾಗಿ ನಡೆಸಲಾಗಿತ್ತು.
ಮೊಬೈಲ್ ಬಳಕೆ ಮತ್ತು ಟಿವಿ ವೀಕ್ಷಣೆಯೇ ಕಾರಣ!
ಮಕ್ಕಳಲ್ಲಿ ಮೊಬೈಲ್ ಬಳಕೆಯ ಪರಿಣಾಮವಾಗಿ ದೃಷ್ಟಿದೋಷ ಮಾತ್ರವಲ್ಲ, ಮಾನಸಿಕ ಸಮಸ್ಯೆಗಳೂ ಕಾಣಿಸಿಕೊಂಡಿವೆ. 6 ರಿಂದ 16 ವರ್ಷ ವಯಸ್ಸಿನ ಮಕ್ಕಳಲ್ಲಿ ಸೌಮ್ಯ ದೃಷ್ಟಿ ಸಮಸ್ಯೆಗಳಿಂದ ಹಿಡಿದು ಗಂಭೀರ ರೀತಿಯ ದೃಷ್ಟಿದೋಷಗಳು ಪತ್ತೆಯಾಗಿವೆ. ಕೆಲವರಿಗೆ ಚಿಕಿತ್ಸೆ ಅಗತ್ಯದ ಹಂತ ತಲುಪಿದೆ. ದೃಷ್ಟಿದೋಷ ಕಂಡುಬಂದ ಮಕ್ಕಳಿಗೆ ಕನ್ನಡಕ ವಿತರಣೆಯನ್ನ ಆರೋಗ್ಯ ಇಲಾಖೆ ಮಾಡಿದೆ. ಗಂಭೀರ ಸಮಸ್ಯೆಯ ಮಕ್ಕಳನ್ನು ತಾಲೂಕು ಆಸ್ಪತ್ರೆಗಳಿಗೆ ರೆಫರ್ ಮಾಡಲಾಗಿದೆ. ಮಾನಸಿಕ ಆರೋಗ್ಯ ಕುರಿತು “ಮನೋಸ್ಥೈರ್ಯ” ಎಂಬ ಜಾಗೃತಿ ಅಭಿಯಾನದ ಜೊತೆಗೆ ಪ್ರತಿ ಶಾಲೆಯ ಒಬ್ಬ ಶಿಕ್ಷಕಿಗೆ ವಿಶೇಷ ತರಬೇತಿ ನೀಡಿ ಮಕ್ಕಳ ಮಾನಸಿಕ ಸಮಸ್ಯೆ ಗುರುತಿಸಲು ಯೋಗ್ಯ ಮಾಡಲಾಗಿದೆ. ಅತಿಯಾದ ಮೊಬೈಲ್ ಬಳಕೆಯು ಮಕ್ಕಳ ದೃಷ್ಟಿ ಹಾಗೂ ಮಾನಸಿಕ ಆರೋಗ್ಯದ ಮೇಲೆ ದೋಷಕಾರಿಯಾಗಿದೆ. ಪೋಷಕರು ಮಕ್ಕಳ ಮೇಲೆ ಹೆಚ್ಚಿನ ಗಮನ ಹರಿಸಿ, ದಿನಚರಿಯ ನಿಯಂತ್ರಣ ಮಾಡುವ ಅಗತ್ಯವಿದೆ ಎಂದಿದ್ದಾರೆ. ಈ ವರದಿ ಹಿನ್ನೆಲೆಗಳಲ್ಲಿ ಮಕ್ಕಳ ಮೊಬೈಲ್ ಬಳಕೆಯನ್ನು ನಿಯಂತ್ರಿಸುವುದು, ಸಮಯಕ್ಕೆ ಸರಿಯಾಗಿ ಕಣ್ಣಿನ ತಪಾಸಣೆ ಮಾಡಿಸುವುದು ಮತ್ತು ತಜ್ಞರ ಸಲಹೆ ಪಡೆಯುವುದು ಅತ್ಯಂತ ಅಗತ್ಯ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.