ಮಂಗಳೂರು: ಮುಂದಿನ ನಾಲ್ಕು ದಿನಗಳವರೆಗೆ ಅರಬ್ಬಿ ಸಮುದ್ರದಲ್ಲಿ ಭಾರೀ ಗಾಳಿ ಬೀಸುವ ಸಂಭವವಿರುವ ಹಿನ್ನೆಲೆಯಲ್ಲಿ ಸಮುದ್ರ ಪ್ರಕ್ಷುಬ್ಧವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಮೀನುಗಾರರು ಸಮುದ್ರಕ್ಕೆ ತೆರಳದಂತೆ ಮಂಗಳೂರು ಮೀನುಗಾರಿಕೆ ಜಂಟಿ ನಿರ್ದೇಶಕರು ಸೂಚನೆ ನೀಡಿದ್ದಾರೆ.

ಜುಲೈ 14ರಿಂದ 17ರವರೆಗೆ, ಅಂದರೆ ನಾಲ್ಕು ದಿನಗಳ ಕಾಲ ಸಮುದ್ರದಲ್ಲಿ ಗಾಳಿ, ಅಲೆಗಳ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನಾಡದೋಣಿಗಳಲ್ಲಿ ಹಾಗೂ ಇತರ ಯಾವುದೇ ಬೋಟ್ ಗಳಲ್ಲಿ ಮೀನುಗಾರಿಕೆ ಮಾಡುತ್ತಿರುವವರು ಸಮುದ್ರಕ್ಕೆ ತೆರಳಬಾರದು ಎಂಬ ಸೂಚನೆ ನೀಡಲಾಗಿದೆ. ತಿರುವನಂತಪುರಂನ ಭಾರತೀಯ ಹವಾಮಾನ ಇಲಾಖೆ ಈ ಮುನ್ನೆಚ್ಚರಿಕೆಯನ್ನು ಹೊರಡಿಸಿದೆ. ಪ್ರಸ್ತುತ ಅರಬ್ಬಿ ಸಮುದ್ರದ ಮೇಲ್ಭಾಗದಲ್ಲಿ ವಾತಾವರಣದ ಒತ್ತಡ ಬದಲಾವಣೆಯ ಕಾರಣದಿಂದಾಗಿ ಗಾಳಿ ಮತ್ತು ಅಲೆಗಳ ಪ್ರಮಾಣ ಹೆಚ್ಚಾಗುತ್ತಿದೆ. ಇದು ಮೀನುಗಾರರ ಜೀವಕ್ಕೆ ಅಪಾಯ ತರಬಹುದೆಂದು ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಹಾಗೂ ಪ್ರವಾಸಿಗರು ಈ ಅವಧಿಯಲ್ಲಿ ಸಮುದ್ರದ ದಡದತ್ತ ಹೋದರೂ ಜಾಗ್ರತೆ ವಹಿಸಬೇಕು.