ಮಂಗಳೂರು: ನಗರದಲ್ಲಿ ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಸರಬರಾಜು ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.

ಒಟ್ಟು 24.57 ಗ್ರಾಂ ಎಂಡಿಎಂಎ ಸೇರಿದಂತೆ ಸುಮಾರು ರೂ. 4.35 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನವೆಂಬರ್ 4ರಂದು ಬಂದರು ಹಾಗೂ ದಕ್ಕೆ ಪ್ರದೇಶದಲ್ಲಿ ಆಟೋದಲ್ಲಿ ಮಾದಕ ವಸ್ತು ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆಟೋ ಚಾಲಕ ಅಬ್ದುಲ್ ಸಲಾಮ್ (39), ದಯಾಂಬು, ಅಡ್ಯಾರ್, ಕಣ್ಣೂರು, ಮಂಗಳೂರು ಎಂಬಾತನನ್ನು ಬಂಧಿಸಿದ್ದಾರೆ.

ಆತನಿಂದ ರೂ. 1.20 ಲಕ್ಷ ಮೌಲ್ಯದ ಎಂಡಿಎಂಎ, ಆಟೋ ರಿಕ್ಷಾ, ಮೊಬೈಲ್ ಫೋನ್, ತೂಕಮಾಪನ ಯಂತ್ರ, ಖಾಲಿ ಜಿಪ್ ಲಾಕ್ ಕವರ್ ಸೇರಿದಂತೆ ಒಟ್ಟು ರೂ. 2.30 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೆಂಬರ್ 6ರಂದು ಬೋಳಿಯಾರು ಪ್ರದೇಶದಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೊಹಮ್ಮದ್ ನಾಸೀರ್ @ ಶಾಕೀರ್ @ ಚಾಕಿ (28), ಬೋಳಿಯಾರು, ಉಳ್ಳಾಲ ತಾಲೂಕು, ಮಂಗಳೂರು ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆತನಿಂದ ರೂ. 1.20 ಲಕ್ಷ ಮೌಲ್ಯದ ಎಂಡಿಎಂಎ, ಕಪ್ಪು ಬಣ್ಣದ ಯಮಹಾ FZ ಬೈಕ್, ಮೊಬೈಲ್ ಫೋನ್ ಮತ್ತು ಖಾಲಿ ಜಿಪ್ ಲಾಕ್ ಕವರ್ ಸೇರಿದಂತೆ ಒಟ್ಟು ರೂ. 2.05 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತಿಳಿಸಿದಂತೆ, ಈ ಮಾದಕ ವಸ್ತು ಮಾರಾಟ ಮತ್ತು ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಿದ್ದು, ಅವರ ಪತ್ತೆ ಕಾರ್ಯ ಮುಂದುವರೆದಿದೆ.
ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು ಪ್ರಮುಖ ಪಾತ್ರವಹಿಸಿದ್ದಾರೆ.
