ಕಡಬ: ಪತ್ನಿ ಜೊತೆ ತನ್ನ ಗೆಳೆಯ ಫೋನ್ ಸಂಪರ್ಕದಲ್ಲಿ ಇದ್ದ ಹಿನ್ನೆಲೆಯಲ್ಲಿ ಮನನೊಂದ ಯುವಕನೊಬ್ಬ ಆತ್ಮಹತ್ಯೆ ಯತ್ನಿಸಿ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಕಡಬ ತಾಲ್ಲೂಕಿನ ಕಳಾರದಲ್ಲಿ ನಡೆದಿದೆ.

ಕುಟ್ರುಪ್ಪಾಡಿ ನಿವಾಸಿ ಸೊಲೊಮೊನ್ (54) ಅವರ ದೂರಿನ ಆಧಾರದ ಮೇಲೆ, ಅವರ ಪುತ್ರ ರಾಕೇಶ್ (36) ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ರಾಕೇಶ್ ಅವರು ಕಡಬದ ಕಳಾರದಲ್ಲಿ ದ್ವಿಚಕ್ರ ವಾಹನ ಗ್ಯಾರೇಜ್ ನಡೆಸುತ್ತಿದ್ದರು. ತಮ್ಮ ಪತ್ನಿ ಹಾಗೂ ಸ್ನೇಹಿತನ ನಡುವೆ ಮೊಬೈಲ್ ಮೂಲಕ ಸಂಪರ್ಕ ಇರುವ ವಿಚಾರ ತಿಳಿದು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಕಡಬ ಬಜಾಜ್ ಶೋರೂಮ್ ಹಿಂಭಾಗದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರೆಂದು ದೂರಿನಲ್ಲಿ ಹೇಳಲಾಗಿದೆ.
ಘಟನಾ ಸ್ಥಳದಲ್ಲಿದ್ದ ಸ್ಥಳೀಯರು ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ರಾಕೇಶ್ ಅವರ ಸಹೋದರ ರಾಜೇಶ್ ದಾಖಲಿಸಿದ್ದರು. ಆದರೆ ಪರಿಣಾಮಕಾರಿ ಚಿಕಿತ್ಸೆ ಸಿಗದೆ ರಾಕೇಶ್ ಮೃತಪಟ್ಟಿರುವುದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
