ಧರ್ಮಸ್ಥಳ: ಧರ್ಮಸ್ಥಳ ಠಾಣಾ ವ್ಯಾಪ್ತಿಯ ಅಕ್ರಮ ಗೋ ಸಾಗಾಟ ಪ್ರಕರಣದಲ್ಲಿ ಆರೋಪಿಗಳಿಗೆ ಜಾನುವಾರು ಮಾರಾಟ ಮಾಡಿದ್ದ ಮಹಿಳೆಯೊಬ್ಬರ ಮನೆ ಜಪ್ತಿ ಮಾಡಿದ್ದ ಧರ್ಮಸ್ಥಳ ಪೊಲೀಸರಿಗೆ ಪುತ್ತೂರು ಸಹಾಯಕ ಆಯುಕ್ತೆ (ಎಸಿ) ಸ್ಟೆಲ್ಲ ವರ್ಗೀಸ್ ಅವರ ಆದೇಶದಿಂದ ತೀವ್ರ ಹಿನ್ನಡೆ ಎದುರಾಗಿದೆ.

ಆರೋಪಿಗಳಿಗೆ ಜಾನುವಾರು ಮಾರಾಟ ಮಾಡಿದ್ದ ಆರೋಪದ ಮೇರೆಗೆ ಧರ್ಮಸ್ಥಳ ಪೊಲೀಸರು ಪಟ್ರಮೆ ಗ್ರಾಮದ ಸಾರಮ್ಮ ಎಂಬವರ ಮನೆ ಜಪ್ತಿ ಮಾಡಿದ್ದರು. ಆದರೆ ಪುತ್ತೂರು ಎಸಿ ಅವರು ಧರ್ಮಸ್ಥಳ ಪೊಲೀಸರು ಕಾನೂನು ವ್ಯಾಪ್ತಿಯನ್ನು ಮೀರಿ ಜಪ್ತಿ ಮಾಡಿದ್ದಾರೆ ಎಂದು ಹೇಳಿ ಮನೆ ಬಿಡುಗಡೆಗೆ ಆದೇಶಿಸಿದ್ದಾರೆ.

ನವೆಂಬರ್ 2ರಂದು ಧರ್ಮಸ್ಥಳ ಠಾಣಾ ವ್ಯಾಪ್ತಿಯ ಕೊಕ್ಕಡ ಬಳಿ ಅಕ್ರಮ ಜಾನುವಾರು ಸಾಗಾಟ ಪತ್ತೆ ಮಾಡಿದ ಪೊಲೀಸರು, ಆರೋಪಿ ಮಹಮ್ಮದ್ ಸಿನಾನ್ ಮತ್ತು ಇಬ್ರಾಹಿಂ ಖಲೀದ್ ಅವರನ್ನು ಬಂಧಿಸಿ ಜಾನುವಾರುಗಳನ್ನು ವಶಕ್ಕೆ ಪಡೆದಿದ್ದರು.

ಆ ಬಳಿಕ ಉಳ್ಳಾಲ ತಾಲೂಕು ಸಜೀಪನಡುವಿನಲ್ಲಿ ಇವರ ಮನೆಗಳನ್ನು ಜಪ್ತಿ ಮಾಡಿದ ಪೊಲೀಸರು, ನವೆಂಬರ್ 6ರಂದು ಈ ಇಬ್ಬರು ಜಾನುವಾರುಗಳನ್ನು ಖರೀದಿ ಮಾಡಿದ್ದ ಸಾರಮ್ಮರವರ ಮನೆ ಕೂಡ ಜಪ್ತಿ ಮಾಡಿದ್ದರು. ಧರ್ಮಸ್ಥಳ ಪೊಲೀಸರು ಮೂರು ಮನೆಗಳನ್ನೂ ಜಪ್ತಿ ಮಾಡಿ ಪುತ್ತೂರು ಎಸಿಗೆ ವರದಿ ಸಲ್ಲಿಸಿದ್ದರು.

ಸಾರಮ್ಮ ಹಾಗು ಸಿಪಿಎಂ ಹೋರಾಟಗಾರರು ಈ ಕ್ರಮದ ವಿರುದ್ಧ ಪುತ್ತೂರು ಎಸಿಗೆ ದೂರು ಸಲ್ಲಿಸಿದ್ದರು. ತನಿಖೆ ನಡೆಸಿದ ಎಸಿ ಧರ್ಮಸ್ಥಳ ಪೊಲೀಸರ ಕ್ರಮ ಕಾನೂನುಬಾಹಿರವಾಗಿದೆ ಎಂದು ಮನೆ ಬಿಡುಗಡೆಗೆ ಆದೇಶಿಸಿದ್ದಾರೆ. ಜಪ್ತಿ ವೇಳೆ ಧರ್ಮಸ್ಥಳ ಪೊಲೀಸರು ರಾತ್ರಿ ವೇಳೆ ಏಳು ಜನ ಮನೆ ಸದಸ್ಯರನ್ನು ಬಲವಂತವಾಗಿ ಹೊರ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಪುತ್ತೂರು ಎಸಿ ಸ್ಟೆಲ್ಲ ವರ್ಗೀಸ್ ಅವರು ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಸಾರಮ್ಮ ಮನೆ ಬಿಡುಗಡೆಗೆ ಆದೇಶ ನೀಡಿದ್ದು, ಧರ್ಮಸ್ಥಳ ಪೊಲೀಸರಿಗೆ ಇದು ತೀವ್ರ ಹಿನ್ನಡೆಯಾಗಿದೆ. ಜಾನುವಾರು ಮಾರಾಟ ಮಾಡಿದ್ದ ಕಾರಣಕ್ಕೆ ಮನೆ ಜಪ್ತಿ ಮಾಡಿದ್ದ ಧರ್ಮಸ್ಥಳ ಪೊಲೀಸರು ಕಾನೂನು ವ್ಯಾಪ್ತಿಯನ್ನು ಮೀರಿ ಕ್ರಮ ಕೈಗೊಂಡಿದ್ದಾರೆ ಎಂದು ಪುತ್ತೂರು ಎಸಿ ತೀರ್ಮಾನಿಸಿದ್ದು, ಸಾರಮ್ಮ ಮನೆ ಬಿಡುಗಡೆ ಆದೇಶಿಸಿದ್ದಾರೆ. ಅದರಂತೆ ಪೊಲೀಸರು ಜಪ್ತಿ ಮಾಡಿದ್ದ ಮನೆಯ ಬೀಗ ತೆರವು ಮಾಡಿದ್ದಾರೆ.
