ಬಂಟ್ವಾಳ: ಬುರ್ಖಾ ಧರಿಸಿ ಬಂದ ಮಹಿಳೆಯೊಬ್ಬಳು ಅಂಗಡಿಗೆ ನುಗ್ಗಿ ಪತಿಗೆ ಮಾರಣಾಂತಿಕವಾಗಿ ಕತ್ತಿಯಿಂದ ಕಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನಲ್ಲಿ ನಡೆದಿದೆ.

ಬಿ.ಸಿ.ರೋಡಿನ ಸೋಮಯಾಜಿ ಟೆಕ್ಸ್ ಟೈಲ್ ಅಂಗಡಿಗೆ ಬುರ್ಖಾ ಧರಿಸಿ ಮಾರುವೇಷದಲ್ಲಿ ನುಗ್ಗಿದ ಪತ್ನಿ ಜ್ಯೋತಿ ಸೋಮಯಾಜಿ, ಕ್ಯಾಶ್ ಕೌಂಟರ್‌ನಲ್ಲಿ ಕುಳಿತಿದ್ದ ಗಂಡ ಕೃಷ್ಣ ಕುಮಾರ್ ಸೋಮಯಾಜಿ ಮೇಲೆ ಕತ್ತಿಯಿಂದ ಮಾರಣಾಂತಿಕ ದಾಳಿ ನಡೆಸಿದ್ದು, ದಾಳಿ ಬಳಿಕ ಜ್ಯೋತಿ ಪರಾರಿಯಾಗಲು ಯತ್ನಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡ ಕೃಷ್ಣ ಕುಮಾರ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿತೆ ಜ್ಯೋತಿ ಸೋಮಯಾಜಿಯನ್ನು ಬಂಟ್ವಾಳ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ದಂಪತಿಯಲ್ಲಿ ಕೌಟುಂಬಿಕ ಕಲಹ ಹೆಚ್ಚಿದ್ದ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ಈ ಸಂಬಂಧ ದಂಪತಿ ಪೋಲೀಸ್ ಠಾಣೆಯ ಮೆಟ್ಟಿಲನ್ನೂ ಏರಿದ್ದರೆಂದು ತಿಳಿದುಬಂದಿದೆ.
