ಮಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ರ ಆಪ್ತನಿಗೂ ಈಗ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (EOW) ದಿಂದ ನೋಟಿಸ್ ಜಾರಿಯಾಗಿದೆ. ಮಂಗಳೂರಿನ ಕಾಂಗ್ರೆಸ್ ನಾಯಕ ಇನಾಯತ್ ಅಲಿ ಅವರಿಗೆ ದೆಹಲಿ ಪೊಲೀಸರು ಮನೆಯಲ್ಲೇ ಬಂದು ನೋಟಿಸ್ ನೀಡಿದ್ದಾರೆ.

ಈಡಿ ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗವು ಈಗಾಗಲೇ ಎಫ್ಐಆರ್ ದಾಖಲಿಸಿತ್ತು. ಅಕ್ಟೋಬರ್ 3ರಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣದಲ್ಲಿ ಕೆಲವು ದಿನಗಳ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ಅವರಿಗೆ ನೋಟಿಸ್ ನೀಡಲಾಗಿತ್ತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರಿಗೆ ಮುಂದಿನ ಒಂದು ವಾರದಲ್ಲಿ ದೆಹಲಿ ಪೊಲೀಸರ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ. ದೆಹಲಿ ಪೊಲೀಸರು ನೀಡಿರುವ ನೋಟಿಸ್ನಲ್ಲಿ ಕೆಳಗಿನ ವಿವರಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಇನಾಯತ್ ಅಲಿ ಅವರ ವೈಯಕ್ತಿಕ ಹಿನ್ನೆಲೆ, ಕಾಂಗ್ರೆಸ್ ಪಕ್ಷದೊಂದಿಗಿನ ಸಂಬಂಧ ಮತ್ತು ರಾಜಕೀಯ ಪಾತ್ರ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ನೀಡಿದ ದೇಣಿಗೆಯ ಪ್ರಮಾಣ, ದೇಣಿಗೆ ಯಾವ ರೀತಿಯಲ್ಲಿ ನೀಡಲಾಗಿದೆ? ಆ ಹಣವನ್ನು ಯಾವ ಉದ್ದೇಶಕ್ಕೆ ಬಳಸಲಾಗಿದೆ ಎಂಬ ಮಾಹಿತಿ ಅವರಿಗೆ ಗೊತ್ತಿತ್ತೇ? ಎಂದು ಕೇಳಲಾಗಿದೆ. ನ್ಯಾಷನಲ್ ಹೆರಾಲ್ಡ್ ಸಂಸ್ಥೆಗೆ ಇನಾಯತ್ ಅಲಿ ಆರ್ಥಿಕ ಸಹಾಯ ಒದಗಿಸಿದ್ದರೆಂಬ ಮಾಹಿತಿ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಅವರು Enforcement Directorate (ಈಡಿ) ತನಿಖೆಗೂ ಒಳಪಟ್ಟಿದ್ದರು. ಅದರ ಮುಂದುವರಿದ ಹಂತವಾಗಿ ಈಗ ದೆಹಲಿ ಪೊಲೀಸರ ನೋಟಿಸ್ ಬಂದಿದೆ.
