ಬಂಟ್ವಾಳ: ಪಾಸ್ಪೋರ್ಟ್ ಪೊಲೀಸ್ ಕ್ಲಿಯರೆನ್ಸ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ಬೆಳಕಿಗೆ ಬಂದಿದ್ದು, ದಾಖಲೆಗಳ ನಾಶ ಹಾಗೂ ಫೋರ್ಜರಿ ಸಹಿ ಬಳಸಿ ಕ್ಲಿಯರೆನ್ಸ್ ನೀಡಿದ್ದ ಆರೋಪದಡಿ ಪೊಲೀಸ್ ಕಾನ್ಸ್ಟೇಬಲ್ ಒಬ್ಬರನ್ನು ಬಂಧಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾನ್ಸ್ಟೇಬಲ್ ಪ್ರದೀಪ್ ಅವರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಫೆಬ್ರವರಿ ತಿಂಗಳಲ್ಲಿ ಪಾಸ್ಪೋರ್ಟ್ಗಾಗಿ ಶಕ್ತಿದಾಸ್ ಎಂಬವರು ಅರ್ಜಿ ಸಲ್ಲಿಸಿದ್ದರು. ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕಾಶಿಮಠದ ವಿಳಾಸ ನೀಡಿದ್ದ ಶಕ್ತಿದಾಸ್ ಮೂಲತಃ ಪಶ್ಚಿಮ ಬಂಗಾಳದವರಾಗಿದ್ದು, ಅರ್ಜಿದಾರನ ವಿಳಾಸ ಹಾಗೂ ದಾಖಲಾತಿಗಳಲ್ಲಿನ ವಿಳಾಸಗಳು ಹೊಂದಿಕೆಯಾಗದ ಹಿನ್ನೆಲೆ ಬೀಟ್ ಪೊಲೀಸ್ ಸಿಬ್ಬಂದಿ ಸಾಬು ಮಿರ್ಜಿ ಅವರು ಅರ್ಜಿಯನ್ನು ನಾ-ಶಿಫಾರಸ್ಸು ಮಾಡಿದ್ದರು.
ಆದರೆ ಜೂನ್ ತಿಂಗಳಲ್ಲಿ ಶಕ್ತಿದಾಸ್ ಮರುಅರ್ಜಿಯನ್ನು ಸಲ್ಲಿಸಿದ್ದು, ಈ ವೇಳೆ ಬೀಟ್ ಸಿಬ್ಬಂದಿಗೆ ಅರಿವಾಗದಂತೆ ಕಾನ್ಸ್ಟೇಬಲ್ ಪ್ರದೀಪ್ ಅವರು ಅರ್ಜಿಯನ್ನು ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ. ಬೀಟ್ ಸಿಬ್ಬಂದಿಯ ಹೆಸರಿನಲ್ಲಿ ಪರಿಶೀಲನಾ ವರದಿ ತಯಾರಿಸಿ ಸಹಿಯನ್ನು ಫೋರ್ಜರಿ ಮಾಡಿರುವುದರ ಜೊತೆಗೆ, ಪರಿಶೀಲನಾ ದಾಖಲೆಗಳನ್ನು ನಾಶಪಡಿಸಿದ್ದ ಆರೋಪವೂ ಪ್ರದೀಪ್ ವಿರುದ್ಧ ಕೇಳಿಬಂದಿದೆ. ಪಾಸ್ಪೋರ್ಟ್ ಅರ್ಜಿಗಳ ಪರಿಶೀಲನಾ ವರದಿಗಳ ದಾಖಲೆಗಳನ್ನು ಪರಿಶೀಲನೆ ಮಾಡುವ ವೇಳೆ ಈ ಅಕ್ರಮ ಬೆಳಕಿಗೆ ಬಂದಿದ್ದು, ಹೀಗಾಗಿ ಶಕ್ತಿದಾಸ್ಗೆ ಪಾಸ್ಪೋರ್ಟ್ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೆಟ್ ದೊರಕಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಈ ಸಂಬಂಧ ಪಾಸ್ಪೋರ್ಟ್ ಪಡೆದ ಶಕ್ತಿದಾಸ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 336, 337, 316(5), 238 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಕಾನ್ಸ್ಟೇಬಲ್ ಪ್ರದೀಪ್ ಅವರನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
