ಮಂಗಳೂರು: 2022ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಬಳಿ ನಡೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ರಹಿಮಾನ್ ಅನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ.

ಅಬ್ದುಲ್ ರಹಿಮಾನ್ ಕೊಲ್ಲಿ ರಾಷ್ಟ್ರ ಕತಾರ್ ನಿಂದ ಕೇರಳದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ನೇರವಾಗಿ ಎನ್‌ಐಎ ಬಲೆಗೆ ಬಿದ್ದಿದ್ದಾನೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಎನ್‌ಐಎ ಈವರೆಗೆ ಒಟ್ಟು 28 ಮಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದು, ಅಬ್ದುಲ್ ರಹಿಮಾನ್ ಸೇರಿ ನಾಲ್ವರ ವಿರುದ್ಧ ಈ ವರ್ಷದ ಏಪ್ರಿಲ್‌ನಲ್ಲಿ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಿತ್ತು.
ಇವರಲ್ಲಿ ಆರು ಮಂದಿ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಸುಳಿವು ನೀಡಿದವರಿಗೆ ಬಹುಮಾನವನ್ನೂ ಎನ್‌ಐಎ ಘೋಷಿಸಿತ್ತು. ಅಬ್ದುಲ್ ರಹಿಮಾನ್ ಕೂಡ ಈ ಪಟ್ಟಿಯಲ್ಲಿದ್ದನು. ಎನ್‌ಐಎ ಪ್ರಾಥಮಿಕ ತನಿಖೆಯ ಪ್ರಕಾರ, ಪ್ರವೀಣ್ ಹತ್ಯೆ ಸಮಾಜದಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಮತ್ತು PFI ಪ್ರಮುಖರ ಸೂಚನೆಯಂತೆ ಯೋಜಿತವಾಗಿ ನಡೆಸಲಾಗಿತ್ತು. ಇತರ ಆರೋಪಿಗಳು ಸಿಕ್ಕಿಬಿದ್ದ ಬಳಿಕ ಅಬ್ದುಲ್ ರಹಿಮಾನ್ ವಿದೇಶಕ್ಕೆ ಪರಾರಿಯಾಗಿದ್ದನು.
ಈ ಪ್ರಕರಣದ ಎಫ್ಐಆರ್ ಎನ್‌ಐಎ ದೆಹಲಿಯ ಕಚೇರಿಯಲ್ಲಿ ದಾಖಲಾಗಿ, ವಿಶೇಷ ತನಿಖಾ ತಂಡವು ಕಾರ್ಯಾಚರಣೆ ನಡೆಸಿತ್ತು. ಇದೀಗ ಈ ಬಂಧನದೊಂದಿಗೆ ಪ್ರಕರಣದ ಮತ್ತಷ್ಟು ಮರ್ಮ ಬೆಳಕಿಗೆ ಬರಲಿರುವ ನಿರೀಕ್ಷೆ ವ್ಯಕ್ತವಾಗಿದೆ.