ಮಂಗಳೂರು: ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿರುವ ಎಂಆರ್‌ಪಿಎಲ್ (ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್) ಘಟಕದಲ್ಲಿ ಶನಿವಾರ ಮುಂಜಾನೆ ವಿಷಾನಿಲ ಸೋರಿಕೆಯಾಗಿ ಇಬ್ಬರು ಸಿಬ್ಬಂದಿ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ದೀಪ ಚಂದ್ರ ಭಾರ್ತಿಯಾ ಮತ್ತು ಬಿಜಿಲ್ ಪ್ರಸಾದ್ ಎಂದು ಗುರುತಿಸಲಾಗಿದೆ. ಇವರು ಎಂಆರ್‌ಪಿಎಲ್‌ನ ಆಯಿಲ್ ಮೂವ್‌ಮೆಂಟ್ ವಿಭಾಗದ ಟ್ಯಾಂಕ್ ಫಿಬಿ7029 (ಡ್ರೈ ಸ್ಲೋಪ್ ಸರ್ವಿಸ್ – ಫ್ಲೋಟಿಂಗ್ ರೂಫ್)ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಮೇಲ್ಛಾವಣಿಗೆ ಪರಿಶೀಲನೆಗಾಗಿ ಹೋಗಿದ್ದರು. ಆದರೆ ತಕ್ಷಣವೇ ಇಬ್ಬರೂ ಅಸ್ವಸ್ಥರಾಗಿದ್ದು, ಟ್ಯಾಂಕ್ ಮೇಲ್ಛಾವಣಿಯಲ್ಲಿಯೇ ಕುಸಿದುಬಿದ್ದಿದ್ದಾರೆ. ತಕ್ಷಣ ವೈದ್ಯಕೀಯ ನೆರವು ಒದಗಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾದರೂ, ಇಬ್ಬರನ್ನೂ ಉಳಿಸಲು ಸಾಧ್ಯವಾಗಲಿಲ್ಲ.
ಇವರ ರಕ್ಷಣೆಗೆ ಮುಂದಾದ ಮತ್ತೊಬ್ಬ ಸಿಬ್ಬಂದಿ ವಿನಾಯಕ ಮಯಗೇರಿ ಅವರು ಕೂಡ ವಿಷಾನಿಲದ ಪರಿಣಾಮದಿಂದ ಅಸ್ವಸ್ಥಗೊಂಡಿದ್ದು, ಇದೀಗ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ.
ಘಟನೆಯ ಕುರಿತು ಸಮಗ್ರ ತನಿಖೆ ನಡೆಸಲು ಎಂಆರ್‌ಪಿಎಲ್ ಆಡಳಿತವು ಗ್ರೂಪ್ ಜನರಲ್ ಮ್ಯಾನೇಜರ್‌ಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.