ಮಂಗಳೂರು: ಕದ್ರಿ ಸಂಚಾರಿ ಠಾಣೆಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಎಸ್ಸೈ ತಸ್ಲೀಂ ಆರಿಫ್ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣ ಸಂಬಂಧಿಸಿ ತಸ್ಲೀಂ ಸೇರಿ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ನೀಡಲಾಗಿದೆ.

ಎಎಸ್ಸೈ ತಸ್ಲೀಂ, ಅಪಘಾತ ಪ್ರಕರಣವೊಂದರಲ್ಲಿ ಕಾರು ಬಿಟ್ಟುಕೊಡಲು 50,000 ರೂ. ಲಂಚದ ಬೇಡಿಕೆಯಿಟ್ಟಿದ್ದು, ಇನ್ನೊಂದು ಪ್ರಕರಣದಲ್ಲಿ ಲೈಸೆನ್ಸ್ ಹಿಂದಿರುಗಿಸಲು 5,000 ರೂ. ಲಂಚ ಕೇಳಿದ್ದ ಎನ್ನಲಾಗಿದೆ. ತಸ್ಲೀಂ ಈ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಅವರನ್ನು ಬಲೆಗೆ ಹಾಕಿದ್ದರು. ಇದೀಗ ಬಂಧಿತ ಎಎಸ್ಸೈ ತಸ್ಲೀಂ ಆರಿಫ್, ತಸ್ಲೀಂಗೆ ಸಹಕರಿಸಿದ್ದ ಸಿಬ್ಬಂದಿ ವಿನೋದ್ ಹಾಗೂ ಕದ್ರಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ರವಿ ಹೆಚ್, ದೀಪಕ್, ಮಹಾಂತೇಶ್ ಅಮಾನತು ಮಾಡಲಾಗಿದೆ. ತಸ್ಲೀಂ ಮತ್ತು ವಿನೋದ್ ವಿರುದ್ಧ ಲಂಚ ಸ್ವೀಕಾರದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಇತರ ಮೂವರು ಸಿಬ್ಬಂದಿಯ ವಿರುದ್ಧ ಕರ್ತವ್ಯ ಲೋಪ, ನಿರ್ಲಕ್ಷ್ಯ ಮತ್ತು ಮೇಲಾಧಿಕಾರಿಗಳಿಗೆ ಮಾಹಿತಿ ನೀಡದೆ ಗೌಪ್ಯವಾಗಿ ಇಟ್ಟಿದ್ದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಅವರು ಐವರು ಸಿಬ್ಬಂದಿಯ ಅಮಾನತು ಆದೇಶ ಹೊರಡಿಸಿದ್ದಾರೆ.