ಮಂಗಳೂರು: ಕುಂಪಲ ಬೈಪಾಸ್ ನಲ್ಲಿ ನಾಯಿ ದಾಳಿ ನಡೆಸಿ ವ್ಯಕ್ತಿ ಸಾವು ಪ್ರಕರಣದಲ್ಲಿ ಕೆಲವರು ಕೊಲೆ ಎಂಬ ವದಂತಿ ಹಬ್ಬಿಸುತ್ತಿದ್ದು, ಯಾವುದೇ ಸುಳ್ಳು ಮಾಹಿತಿ ಹಬ್ಬಿಸದಂತೆ ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಸದ್ಯ ಕೊಂದಿದ್ದ ನಾಯಿ ಕೂಡಾ ಪತ್ತೆಯಾಗಿದೆ ಮತ್ತು ಅದರ ದೇಹದ ಮೇಲೆ ಸ್ಪಷ್ಟವಾದ ರಕ್ತದ ಕಲೆಗಳು ಕಂಡುಬಂದಿವೆ. ಕೆಲವರು ಇಲ್ಲಿ ಕೊಲೆ ನಡೆದಿದೆ ಎಂದು ವದಂತಿ ಹಬ್ಬಿಸುವ ಕೆಲಸದಲ್ಲಿದ್ದಾರೆ. ಅವರು ಪತ್ತೆಯಾಗುತ್ತಿದ್ದಂತೆಯೇ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಯಾರಿಗಾದರೂ ಯಾವುದೇ ಅನುಮಾನಗಳಿದ್ದರೆ ಅವರು ಪೋಸ್ಟ್‌ಮಾರ್ಟಂ ಸಂದರ್ಭದಲ್ಲಿ ಹಾಜರಾಗಿ ಪೊಲೀಸರು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆಂದು ನೇರವಾಗಿ ನೋಡಬಹುದು. ಯಾವುದೇ ಮಾಹಿತಿ, ಸುಳಿವು ಅಥವಾ ಹೊಸ ಬೆಳವಣಿಗೆಗಳು ಯಾವಾಗಾದರೂ, ಎಲ್ಲಿಯಾದರೂ ದೊರಕಿದರೆ ನಾವು ಸದಾ ಸ್ವಾಗತಿಸುತ್ತೇವೆ. ಇನ್ನೂ ಯಾರಿಗಾದರೂ ಯಾವುದೇ ಅನುಮಾನಗಳಿದ್ದರೆ, ಅವರು ನನಗೆ ಅಥವಾ ಯಾವುದೇ ಹಿರಿಯ ಅಧಿಕಾರಿಗೆ ನೇರವಾಗಿ ಮಾತನಾಡಬಹುದು. ಆದರೆ ಸುಳ್ಳು ಮಾಹಿತಿ ಹಬ್ಬಿಸಬಾರದು ಎಂದು ಎಚ್ಚರಿಸಿದ್ದಾರೆ.

ಕುಂಪದಲ್ಲಿ ಆಗಿದ್ದೇನು?
ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುಂಪಲ ಬೈಪಾಸ್ ಸಮೀಪದ ಜನವಸತಿ ಪ್ರದೇಶದಲ್ಲಿ ಬೀದಿ ನಾಯಿಯ ದಾಳಿಗೆ 60 ವರ್ಷ ಪ್ರಾಯದ ದಯಾನಂದ ಬಲಿಯಾಗಿದ್ದಾರೆ. ಇವರು ಕುಂಪಲ ಗ್ರಾಮದ ನಿವಾಸಿ. ಕುಂಪಲ ಬೈಪಾಸ್ ಸಮೀಪದಲ್ಲಿರುವ ಜನವಸತಿ ಪ್ರದೇಶದಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ದಯಾನಂದ ಅವರ ಮೃತದೇಹ ಪತ್ತೆಯಾದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಅವಿವಾಹಿತರಾಗಿದ್ದ ದಯಾನಂದ ಕುಡಿತದ ಚಟ ಹೊಂದಿದ್ದು ರಾತ್ರಿ ವೇಳೆ ಸ್ಥಳೀಯವಾಗಿ ನೇಮ, ಕೋಲ, ಜಾತ್ರೆಗಳಿಗೆ ತೆರಳಿ ಕುಂಪಲದ ಅಂಗಡಿ ಮುಂಭಾಗ ಮಲಗಿ ಬೆಳಗ್ಗಿನ ವೇಳೆ ಮನೆ ಸೇರುತ್ತಿದ್ದರು. ಇಂದು ಮುಂಜಾನೆ ಮೂರು ಮೂವತ್ತರ ವೇಳೆಗೆ ಅಂಗಡಿಯೊಂದರ ಮುಂಭಾಗ ದಯಾನಂದ ಇದ್ದಿದ್ದನ್ನು ಅಂಗಡಿ ಮಾಲೀಕ ವಿನೋದ್ ಎಂಬವರು ನೋಡಿದ್ದಾರೆ. ಆದಾದ ಬಳಿಕ ಬೆಳಗ್ಗೆ ಏಳು ಮೂವತ್ತರ ಸುಮಾರಿಗೆ ಪಕ್ಕದ ಅಂಗಡಿಯೊಂದರ ಮುಂಭಾಗ ವ್ಯಕ್ತಿಯೊಬ್ಬರ ಕಣ್ಣು ಗುಡ್ಡೆಯೊಂದು ಬಿದ್ದಿರೋದು, ಅಂಗಡಿ ಮುಂಭಾಗ ರಕ್ತಸಿಕ್ತವಾಗಿರೋದು ಕಂಡು ಬಂದಿದೆ. ಇನ್ನಷ್ಟು ಪರಿಶೀಲನೆ ಮಾಡಿದಾಗ ಅಂಗಡಿ ಸಮೀಪದ ಮನೆಯೊಂದರ ಮುಂಭಾಗ ರಕ್ತದ ಮಡುವಿನಲ್ಲಿ ಬಿದ್ದಿರುವ ಸ್ಥಿತಿಯಲ್ಲಿ ದಯಾನಂದ ಮೃತದೇಹ ಪತ್ತೆಯಾಗಿದೆ. ಮೃತದೇಹದ ಪಕ್ಕದಲ್ಲೇ ನಾಯಿಯ ಸಹ ಇದ್ದು ಬೀದಿ ನಾಯಿ ದಾಳಿ ಸ್ಪಷ್ಟವಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಫ್.ಎಸ್.ಎಲ್, ಸೋಕೋ ತಂಡ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
