ಮಂಗಳೂರು: ಮಂಗಳೂರಿನ ಹೊರವಲಯ ಪಣಂಬೂರು ಸಿಗ್ನಲ್ ಬಳಿ ನಡೆದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 66 ರ ಪಣಂಬೂರು ಸಿಗ್ನಲ್ ಬಳಿ ಸಿಗ್ನಲ್ ನಲ್ಲಿ ಸರತಿಯಲ್ಲಿದ್ದ ಎರಡು ಟ್ಯಾಂಕರ್, ಆಟೊ ರಿಕ್ಷಾ ಮತ್ತು ಕಾರುಗಳ ನಡುವೆ ಈ ಭೀಕರ ಅಪಘಾತ ನಡೆದಿದೆ. ಸಿಗ್ನಲ್ ನಲ್ಲಿ ನಿಂತಿದ್ದ ಟ್ಯಾಂಕರ್ ಹಿಂಭಾಗದಲ್ಲಿ ಕಾರು ಮತ್ತು ಆಟೊ ರಿಕ್ಷಾ ನಿಂತಿದ್ದ ವೇಳೆ, ಹಿಂದಿನಿಂದ ವೇಗವಾಗಿ ಬಂದ ಮತ್ತೊಂದು ಟ್ಯಾಂಕರ್ ಆಟೊ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರಿಕ್ಷಾ ಮುಂದೆ ನಿಂತಿದ್ದ ಕಾರಿಗೆ ಅಪ್ಪಳಿಸಿ, ನಂತರ ಕಾರು ಮುಂದೆ ನಿಂತಿದ್ದ ಟ್ಯಾಂಕರ್ ಗೆ ಗುದ್ದಿದೆ. ಎರಡು ಟ್ಯಾಂಕರ್ ಗಳ ಮಧ್ಯೆ ಸಿಲುಕಿದ ಆಟೊ ರಿಕ್ಷಾ ಸಂಪೂರ್ಣವಾಗಿ ಜಜ್ಜಿನಂತಾಗಿದೆ. ಈ ದುರಂತದಲ್ಲಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಹಾಗೂ ರಿಕ್ಷಾ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಮಂಗಳೂರು ಉತ್ತರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಮಾಹಿತಿ ಹಾಗೂ ಅಪಘಾತದ ನಿಖರ ಕಾರಣ ತಿಳಿದುಬರುವ ನಿರೀಕ್ಷೆಯಿದೆ.
