ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸೇರಿದಂತೆ ಹಲವೆಡೆ ನಿನ್ನೆ ಮಧ್ಯಾಹ್ನದಿಂದ ತಡ ರಾತ್ರಿವರೆಗೆ ನಿರಂತರ ಮಳೆಯಾಗಿದೆ. ಮಳೆಯ ತೀವ್ರತೆಗೆ ಉಳ್ಳಾಲಬೈಲ್ ಹಾಗೂ ಕುಂಪಲ ನಿಸರ್ಗ ಲೇಔಟ್‌ನ ಕೆಲ ಮನೆಗಳಿಗೆ ಮಳೆನೀರು ನುಗ್ಗಿರುವ ಘಟನೆ ನಡೆದಿದೆ.

ನಗರದ ಹಲವು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಗುಡ್ಡ ಕುಸಿತಗಳು ಸಂಭವಿಸಿದೆ. ಅದ್ಯಪಾಡಿ–ಕೈಕಂಬ ಸಂಪರ್ಕ ರಸ್ತೆಯ ಮೇಲೆ ಮಣ್ಣು ಜರಿದ ಘಟನೆ ಮೂಡುಕೆರೆ ಎಂಬಲ್ಲಿ ನಡೆದಿದೆ.

ಅದೇ ರೀತಿ ನಗರದ ಸರ್ಕ್ಯೂಟ್ ಹೌಸ್ ರಸ್ತೆಯೂ ವಿಮಾನ ನಿಲ್ದಾಣ ಸಂಪರ್ಕಿಸುವ ರಸ್ತೆಗಳ ಮೇಲೂ ಮಣ್ಣು ಜರಿದಿದ್ದು, ಸಂಚಾರಕ್ಕೆ ತೊಂದರೆ ಉಂಟಾಗಿದೆ. ಜಿಲ್ಲಾಧಿಕಾರಿ ದರ್ಶನ್ ಅವರು ತಡರಾತ್ರಿ ಮಳೆಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮಳೆ ವಿರಾಮ ಪಡೆದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತವು ಇಂದು (ಜುಲೈ 17) ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿದೆ.