ಮಂಗಳೂರು: ಮಂಗಳೂರು ಮೂಲದ ಐಷಾರಾಮಿ ವಂಚಕ ರೋಷನ್ ಸಲ್ದಾನಾ ಆಂಧ್ರಪ್ರದೇಶದ ಉದ್ಯಮಿಗೆ ಭಾರೀ ಮೊತ್ತದ ಸಾಲದ ಭರವಸೆ ನೀಡಿ ಲಕ್ಷಾಂತರ ರೂ. ಹಣ ಪಡೆದು ವಂಚನೆ ಎಸಗಿದ್ದೇ ಆತ ಜೈಲು ಸೇರಲು ಕಾರಣ ಎನ್ನಲಾಗಿದೆ. ಈ ಮೂಲಕವೇ ಆತನ ವಂಚನೆಯ ಮತ್ತಷ್ಟು ಮುಖಗಳು ಬಯಲಿಗೆ ಬಂದಿದೆ.

ಆಂಧ್ರ ಮೂಲದ ಸಿಲ್ಕ್ ಸ್ಯಾರಿ ತಯಾರಿಕಾ ಕಂಪನಿಯ ಮಾಲೀಕನಾಗಿರುವ ಉದ್ಯಮಿ, ತನ್ನ ವ್ಯವಹಾರ ವಿಸ್ತಾರ ಹಾಗೂ ಮನೆ ಕಾಮಗಾರಿಗೆ ಸಾಲ ಪಡೆಯುವ ಉದ್ದೇಶದಿಂದ 2023ರಲ್ಲಿ ಬೆಂಗಳೂರು ಮೂಲದ ಫೈನಾನ್ಸ್ ಕನ್ಸಲ್ಟೆಂಟ್ ವಿಮಲೇಶ್ ಹತ್ತಿಕೊಂಡ ಎಂಬಾತನ ಸಂಪರ್ಕ ಮಾಡುತ್ತಾರೆ. ವಿಮಲೇಶ್ ಮೂಲಕ ‘ಸಾಯಿ ಫೈನಾನ್ಸ್’ ಎಂಬ ಕಂಪನಿ ಮೂಲಕ ಚಿತ್ರದುರ್ಗದಲ್ಲಿ ಸಾಲ ನೀಡಲಾಗುತ್ತದೆ ಎಂಬ ಭರವಸೆ ಸಿಕ್ಕಿದೆ.

2023ರ ನವೆಂಬರ್‌ನಲ್ಲಿ ಉದ್ಯಮಿ ಚಿತ್ರದುರ್ಗದ ಕೋಟೆ ರಸ್ತೆಯಲ್ಲಿರುವ ‘ಸಾಯಿ ಫೈನಾನ್ಸ್’ ಕಛೇರಿಗೆ ಈ ಉದ್ಯಮಿ ಭೇಟಿ ನೀಡಿದ್ದಾರೆ. ಅಲ್ಲಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ರೋಷನ್ ಸಲ್ದಾನಾ ಅವರನ್ನು ವಿಮಲೇಶ್ ಪರಿಚಯಿಸಿದ್ದ. ಆಗ ರೋಷನ್, “ಸಾಲ ಮಂಜೂರಾಗಬೇಕು ಅಂದ್ರೆ 80 ಸ್ಟ್ಯಾಂಪ್ ಪೇಪರ್ ಬೇಕು. ಪ್ರತಿಯೊಂದಕ್ಕೂ ₹49,000 ಎಂದು ಒಟ್ಟು ₹39.20 ಲಕ್ಷ ಖರ್ಚಾಗುತ್ತೆ” ಎಂದು ಉದ್ಯಮಿಯಿಂದ ಹಣ ಹಾಗೂ ದಾಖಲೆಗಳನ್ನು ಪಡೆದುಕೊಂಡ. ಆದರೆ ಬಳಿಕ 15 ದಿನಗಳಲ್ಲಿ ಸಾಲ ಸಿಕ್ಕೀತು ಎಂಬ ಡ್ರಾಮಾ ಆಡಿದ ರೋಷನ್ ಎಸ್ಕೇಪ್ ಆಗಿದ್ದಾನೆ.

ಉದ್ಯಮಿ ತಮ್ಮ ಹಣ ವಾಪಸ್ ಸಿಗದೇ ಇದ್ದಾಗ ಜುಲೈ 16ರಂದು ಚಿತ್ರದುರ್ಗ ನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಪೊಲೀಸರು ವಿಮಲೇಶನ್ನು ಬಂಧಿಸಿ, ತನಿಖೆ ಮುಂದುವರೆಸಿದ ಬಳಿಕ ಮಂಗಳೂರು ಮೂಲದ ರೋಷನ್ ಸಲ್ದಾನಾನನ್ನೂ ವಶಕ್ಕೆ ಪಡೆದಿದ್ದಾರೆ.