ಸುಳ್ಯ: ಸುಳ್ಯ ಕಸಬಾ ಗ್ರಾಮದ ವಿವೇಕಾನಂದ ಸರ್ಕಲ್ ಬಳಿ “ಶ್ರೀ ತತ್ವಮಸಿ ಚಾರಿಟೇಬಲ್ ಟ್ರಸ್ಟ್ (ರಿ)” ಮತ್ತು “ಶ್ರೀ ತತ್ವಮಸಿ ಎಂಟರ್‌ಪ್ರೈಸಸ್ (ರಿ)” ಎಂಬ ಹೆಸರಿನಲ್ಲಿ ಸಂಸ್ಥೆ ಪ್ರಾರಂಭಿಸಿ, ಸಾರ್ವಜನಿಕರಿಂದ ಕೋಟ್ಯಾಂತರ ಹಣ ಸಂಗ್ರಹಿಸಿ ವಂಚಿಸಿದ ಪ್ರಕರಣದಲ್ಲಿ ಮೂವರಿಗೆ ಶಿಕ್ಷೆ ವಿಧಿಸಲಾಗಿದೆ.
2013ರಲ್ಲಿ ಆರಂಭವಾದ ಈ ಸಂಸ್ಥೆಗಳು “ಬೆನಿಫಿಟ್ ಸ್ಕೀಂ” ಎಂಬ ಹೆಸರಿನಲ್ಲಿ ಏಜೆಂಟರ ಮೂಲಕ ಸಾವಿರಾರು ಜನರನ್ನು ಸದಸ್ಯರನ್ನಾಗಿ ಸೇರಿಸಿಕೊಂಡು ಅವರಿಂದ ಒಟ್ಟು 3,08,62,500 ಹಣ ಸಂಗ್ರಹಿಸಿದ್ದವು. ಆದರೆ ಸದಸ್ಯರಿಗೆ ಹಣ ಅಥವಾ ವಸ್ತು ನೀಡದೇ ವಂಚನೆ ಮಾಡಿದ ಹಿನ್ನೆಲೆಯಲ್ಲಿ, ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಬಳಿಕ 8 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಯಿತು. ಈ ಪ್ರಕರಣದ ವಿಚಾರಣೆ ನಡೆಸಿದ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಬಿ. ಮೋಹನ್ ಬಾಬು ಅವರು, ಆರೋಪಿ ಸಂಖ್ಯೆ 2, 4 ಮತ್ತು 5ರ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಕಲಂ 406 ಸಹವಾಚಕ 149ರಡಿ 3 ವರ್ಷಗಳ ಸಾದಾ ಕಾರಾಗೃಹ ವಾಸ, ಕಲಂ 409 ಮತ್ತು 420 ಸಹವಾಚಕ 149ರಡಿ ತಲಾ 3 ವರ್ಷಗಳ ಸಾದಾ ಕಾರಾಗೃಹ ವಾಸ ಮತ್ತು 10,000 ದಂಡ ಹಾಗೂ ದಂಡ ಕಟ್ಟಲು ವಿಫಲರಾದಲ್ಲಿ 6 ತಿಂಗಳ ಹೆಚ್ಚುವರಿ ಸಾದಾ ಕಾರಾಗೃಹ ವಾಸ ವಿಧಿಸಲಾಗಿದೆ. ಆರೋಪಿ ಸಂಖ್ಯೆ 3, 6, 7 ಮತ್ತು 8ರ ವಿರುದ್ಧ ಅಪರಾಧ ಸಾಬೀತಾಗದ ಕಾರಣ ಅವರನ್ನು ಬಿಡುಗಡೆ ಮಾಡಲಾಗಿದೆ.
ಮೊದಲ ಆರೋಪಿಯು ಮರಣಹೊಂದಿರುವುದರಿಂದ ಅವರ ಮೇಲಿನ ಪ್ರಕರಣವನ್ನು ಸ್ಥಗಿತಗೊಳಿಸಲಾಗಿದೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ರಮೇಶ್ ರವರು ವಾದ ಮಂಡಿಸಿದ್ದರು. ಮೂರು ಕೋಟಿ ರೂಪಾಯಿಗಿಂತ ಹೆಚ್ಚು ವಂಚಿಸಿದ ಪ್ರಕರಣದಲ್ಲಿ ನ್ಯಾಯಾಲಯದ ಕಠಿಣ ತೀರ್ಪು ಸಾರ್ವಜನಿಕರಲ್ಲಿ ಪ್ರಶಂಸೆ ಪಡೆದಿದೆ.
