ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ರಾಜಕೀಯ ಶಿಷ್ಟಾಚಾರದ ವಿವಾದ ಉಂಟಾಗಿದೆ. ಮಂಗಳೂರಿನ ನವ ಮಂಗಳೂರು ಬಂದರು ಪ್ರಾಧಿಕಾರದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಆಹ್ವಾನ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ನಾಳೆ ಪಣಂಬೂರಿನ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಬಂದರು ಸಚಿವ ಸರಬಾನಂದ ಸೋನೋವಾಲ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಪ್ರಲ್ಹಾದ್ ಜೋಶಿ, ರಾಜ್ಯ ಬಂದರು ಸಚಿವ ಮಂಕಾಳು ವೈದ್ಯ, ಹಾಲಿ ಸಂಸದ ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕಟೀಲ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಭಾಗವಹಿಸುತ್ತಿದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಆಹ್ವಾನ ನೀಡದಿರುವುದು ವಿವಾದಕ್ಕೆ ಕಾರಣವಾಗಿದೆ. ಗುಂಡೂರಾವ್ ಅವರು ಕೇಂದ್ರ ಬಂದರು ಸಚಿವರಿಗೆ ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನವ ಮಂಗಳೂರು ಬಂದರು ಪ್ರಾಧಿಕಾರದ ಸಾಧನೆಗಳ ಬಗ್ಗೆ ಹೆಮ್ಮೆಪಡುತ್ತೇವೆ. ಆದರೆ ರಾಜ್ಯ ಸರ್ಕಾರದ ಪ್ರತಿನಿಧಿಯನ್ನು ಆಹ್ವಾನಿಸದಿರುವುದು ವಿಷಾದನೀಯ. ಇದು ಉದ್ದೇಶಪೂರ್ವಕ ಶಿಷ್ಟಾಚಾರ ಉಲ್ಲಂಘನೆ ಎಂದು ಹೇಳಿದ್ದಾರೆ. ಪ್ರಾಧಿಕಾರವು ಮಂಗಳೂರು ಬಿಜೆಪಿ ಪಕ್ಷದ ಎಲ್ಲಾ ಹಿಂದಿನ ಮತ್ತು ಪ್ರಸ್ತುತ ನಾಯಕರಿಗೆ ಆಹ್ವಾನ ನೀಡಿದೆ. ಇದು ರಾಜಕೀಯ ಪ್ರಭಾವದ ಸ್ಪಷ್ಟ ಉದಾಹರಣೆ. ಬಂದರು ‘ಕರ್ನಾಟಕದ ಸಮುದ್ರದ್ವಾರ’ವಾಗಿರಬೇಕು, ‘ಬಿಜೆಪಿಯ ಸಮುದ್ರದ್ವಾರ’ ಆಗಬಾರದು,” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಗುಂಡೂರಾವ್ ಅವರು ಪ್ರೋಟೋಕಾಲ್ ಉಲ್ಲಂಘನೆಗೆ ಹೊಣೆಗಾರರಾದ ಬಂದರು ಮತ್ತು ಒಳನಾಡು ಸಾರಿಗೆ ಕಾರ್ಯದರ್ಶಿ ವಿಜಯ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಗಮನಾರ್ಹ ವಿಷಯವೆಂದರೆ, ಕಳೆದ ಬಾರಿ ಇದೇ ವಿಷಯದ ಕುರಿತು ಬಿಜೆಪಿ ಶಾಸಕರು ಗುಂಡೂರಾವ್ ವಿರುದ್ಧ ಶಿಷ್ಟಾಚಾರ ಉಲ್ಲಂಘನೆ ಆರೋಪ ಮಾಡಿದ್ದರು.
ಈ ಬಾರಿ ಪಾತ್ರ ಬದಲಾಗಿ, ಬಿಜೆಪಿ ವಿರುದ್ಧವೇ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
