ಬಂಟ್ವಾಳ: ಬಂಟ್ವಾಳ ತಾಲೂಕು ಕಾವಳಕಟ್ಟೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಕಾರು–ದ್ವಿಚಕ್ರ ವಾಹನದ ಅಪಘಾತದಲ್ಲಿ ಓರ್ವ ವಿದ್ಯಾರ್ಥಿನಿ ಮೃತಪಟ್ಟಿದ್ದು, ಮತ್ತೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಡಬದ ನಿವಾಸಿ ಸುನಿಲ್ ಅವರ ಪುತ್ರಿ ಅನನ್ಯಾ (21) ಮೃತ ವಿದ್ಯಾರ್ಥಿನಿ. ಗಂಭೀರವಾಗಿ ಗಾಯಗೊಂಡವರನ್ನು ಬೆಳ್ತಂಗಡಿಯ ಕುವೆಟ್ಟು ಗ್ರಾಮದ ಗುರುವಾಯನಕೆರೆ ನಿವಾಸಿ, ಪ್ರಣಮ್ಯ ಸ್ಟುಡಿಯೋ ಮಾಲಕರ ಪುತ್ರಿ ಪೃಥ್ವಿ ರಾವ್ ಎಂದು ಗುರುತಿಸಲಾಗಿದ್ದು, ಗಾಯಗೊಂಡ ವಿದ್ಯಾರ್ಥಿನಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಇಬ್ಬರೂ ಮಂಗಳೂರಿನ ಕಾಲೇಜಿನಲ್ಲಿ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿನಿಯರು ಎಂದು ತಿಳಿದು ಬಂದಿದೆ. ಬಂಟ್ವಾಳ–ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯಿಂದ ಕಾವಳಕಟ್ಟೆಯಿಂದ ಎನ್.ಸಿ.ರೋಡ್ ಕಡೆಗೆ ಹೋಗುವ ಮಾರ್ಗದಲ್ಲಿ ಅಪಾಯಕಾರಿ ತಿರುವಿದೆ. ಇಲ್ಲಿ ಇದುವರೆಗೆ ಅನೇಕ ಅಪಘಾತಗಳು ನಡೆದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಕಾಲೇಜಿಗೆ ಬೆಳ್ತಂಗಡಿಯಿಂದ ತೆರಳುತ್ತಿದ್ದ ವೇಳೆ ಈ ಅಪಾಯಕಾರಿ ತಿರುವಿನಲ್ಲಿ ವ್ಯಾಗನಾರ್ ಕಾರು ಮತ್ತು ಹೊಂಡಾ ಆಕ್ಟಿವಾ ಸ್ಕೂಟರ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ.




















