ಕರ್ನಾಟಕ
ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಗಂಭೀರ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ಸಂತ್ರಸ್ಥ ಮಹಿಳೆಯ ಗಂಡ ಹಾಗೂ ಕಾವೂರು ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಚಂದ್ರನಾಯ್ಕ್ ಎಂಬವರನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ಥ ಮಹಿಳೆಯು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನಂತೆ, ಆಕೆಗೇ ಗಂಡ ಹಣಕ್ಕಾಗಿ ಒತ್ತಾಯಪೂರ್ವಕವಾಗಿ ಬೇರೊಬ್ಬ ಪುರುಷನೊಂದಿಗೆ ದೈಹಿಕ ಸಂಪರ್ಕ ನಡೆಸುವಂತೆ ಬಲವಂತ ಮಾಡಿ, ಅದರ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ. ಆ ಬಳಿಕ ಆ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಡುವುದಾಗಿ ಬೆದರಿಕೆ ನೀಡಿದ್ದಾನೆ ಎನ್ನಲಾಗಿದೆ. ಈ ಘಟನೆ ಬಗ್ಗೆ ಕಾವೂರು ಠಾಣೆಯ ಕಾನ್ಸ್ಟೇಬಲ್ ಚಂದ್ರನಾಯ್ಕ್ಗೆ ಮಹಿಳೆ ಮಾಹಿತಿ ನೀಡಿದಾಗ, ಚಂದ್ರನಾಯ್ಕ್ ಅಕೆಯ ಗಂಡನ ಮೊಬೈಲ್ನಲ್ಲಿದ್ದ ಅಪರಾಧ ಸಂಬಂಧಿತ ಫೋಟೋಗಳು ಮತ್ತು ವಿಡಿಯೋಗಳನ್ನು ಅಳಿಸಿ ಹಾಕಿದ್ದಾನೆ. ಆದರೆ ಆ ಬಳಿಕ ಗಂಡನ ಪ್ರೇರಣೆಯಿಂದಲೇ ಚಂದ್ರನಾಯ್ಕ್ ಆ ಮಹಿಳೆಯ ಬಲಾತ್ಕಾರ ಮಾಡಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಕಂಕನಾಡಿ ನಗರ ಠಾಣೆ ಪೊಲೀಸರು ನಡೆಸುತ್ತಿದ್ದಾರೆ.
ಕಾನ್ಸ್ಟೇಬಲ್ ಹಾಗೂ ಪತಿಯಿಂದಲೇ ಮಹಿಳೆಗೆ ದೌರ್ಜನ್ಯ!
ತನ್ನ ಪತಿಯ ಪೀಡನೆಯಿಂದ ಕಂಗಾಲಾದ ಮಹಿಳೆ, ನೆರವಿಗಾಗಿ ಸಂಪರ್ಕಿಸಿದ ಪೊಲೀಸ್ ಕಾನ್ಸ್ಟೇಬಲ್ನಿಂದಲೂ ದೌರ್ಜನ್ಯಕ್ಕೊಳಗಾಗಿರುವ ಘಟನೆ ಇದಾಗಿದೆ. ಗಂಡ ತನ್ನ ಖಾಸಗಿ ವಿಡಿಯೋಗಳನ್ನು ರಹಸ್ಯವಾಗಿ ಸೆರೆಹಿಡಿದು ಅದರ ಆಧಾರದಲ್ಲಿ ಬ್ಲಾಕ್ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಪತಿ, “ತಾನು ಹೇಳಿದ ಪುರುಷರೊಂದಿಗೆ ಮಲಗಬೇಕು” ಎಂದು ಪತ್ನಿಗೆ ಒತ್ತಡ ಹೇರಿದ್ದ. ಬಲವಂತವಾಗಿ ಹಲವು ಪುರುಷರೊಂದಿಗೆ ದೈಹಿಕ ಸಂಬಂಧಕ್ಕೆ ದೂಡುತ್ತಿದ್ದ ಪತಿ, ತನ್ನ ಪತ್ನಿಯನ್ನು ಸಾಕಷ್ಟು ಜನರ ಬಳಿ ಸೆಕ್ಸ್ಗಾಗಿ ಕಳಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ. ಲೈಂಗಿಕ ದೌರ್ಜನ್ಯ
ತೀವ್ರ ಮಾನಸಿಕ ಶೋಷಣೆಗೆ ಒಳಗಾಗಿ, ಸಂತ್ರಸ್ತೆ ತನ್ನ ಪರಿಚಿತರ ಮುಖಾಂತರ ಕಾವೂರು ಠಾಣೆಯ ಕಾನ್ಸ್ಟೇಬಲ್ ಚಂದ್ರನಾಯಕ್ನನ್ನು ಸಂಪರ್ಕಿಸುತ್ತಾಳೆ. ವಿಡಿಯೋ ಅಳಿಸುವಂತೆ ಮನವಿ ಮಾಡಿದ ಮಹಿಳೆಗೆ ಸಹಾಯ ಮಾಡುವ ನಾಟಕವಾಡಿದ ಚಂದ್ರನಾಯಕ್, ಮೊದಲು ಪತಿಯ ಫೋನ್ನಿಂದ ವಿಡಿಯೋ ಅಳಿಸಿ, ನಂತರ ಪತಿ-ಪತ್ನಿ ನಡುವಿನ ರಾಜಿಗೂ ಸಹಕಾರ ನೀಡಿದ್ದ. ಆದರೆ ಈ ಸಂಬಂಧದಿಂದ ನಂಬಿಕೆ ಪಡೆದ ಚಂದ್ರನಾಯಕ್, ಪತಿಯ ಸಹಕಾರದಿಂದ ಮಹಿಳೆಯ ಬಳಿ ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ತನ್ನ ಅಧಿಕಾರದ ದುರುಪಯೋಗ ಮಾಡಿಕೊಂಡ ಈ ಪೊಲೀಸ್ ಸಿಬ್ಬಂದಿ, ಪದೇ ಪದೇ ಮಹಿಳೆಯ ಬಳಿ ಹೋಗಿ ದೌರ್ಜನ್ಯ ಮುಂದುವರೆಸಿದ್ದಾನೆ. ಪತಿಯೊಂದಿಗೆ ಕೈಜೋಡಿಸಿ ಹಳೆಯ ಚಾಳಿಯನ್ನು ಮುಂದುವರೆಸಲು ಸಹಕಾರ ನೀಡಿದ ಆರೋಪ ಸಹ ಇದೆ. ಹೀಗಾಗಿ ಅನ್ಯ ದಾರಿ ಕಾಣದೆ ನೊಂದ ಸಂತ್ರಸ್ತೆ, ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ನೇರವಾಗಿ ದೂರು ಸಲ್ಲಿಸಿದ್ದಾಳೆ. ಈ ದೂರಿನ ಆಧಾರದ ಮೇಲೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಸಂತ್ರಸ್ತೆಯ ಪತಿ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಚಂದ್ರನಾಯಕ್ ಬಂಧನಕ್ಕೊಳಗಾಗಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದೆ.