ಕಾಲೇಜು ಕ್ಯಾoಪಸ್
ಬೆಂಗಳೂರು: ಮೂಡಬಿದಿರೆ ಬಳಿಯ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ಮೇಲೆ ಉಪನ್ಯಾಸಕರು ಹಾಗೂ ಅವರ ಗೆಳೆಯನಿಂದ ಅತ್ಯಾಚಾರ ನಡೆದಿದೆ ಎಂಬ ಗಂಭೀರ ಆರೋಪ ಬೆಳಕಿಗೆ ಬಂದಿದೆ. ಈ ಸಂಬಂಧ ಬೆಂಗಳೂರಿನ ಮಾರತ್ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಾದವರು ಫಿಜಿಕ್ಸ್ ಉಪನ್ಯಾಸಕ ನರೇಂದ್ರ, ಬಯೋಲಜಿ ಉಪನ್ಯಾಸಕ ಸಂದೀಪ್ ಮತ್ತು ಅವರ ಗೆಳೆಯ ಅನೂಪ್ ಎಂದು ಗುರುತಿಸಲಾಗಿದೆ. ಆರೋಪದ ಪ್ರಕಾರ, ಫಿಜಿಕ್ಸ್ ಉಪನ್ಯಾಸಕ ನರೇಂದ್ರ ತನ್ನ ವಿದ್ಯಾರ್ಥಿನಿಗೆ ನೋಟ್ಸ್ ನೀಡುವ ನೆಪದಲ್ಲಿ ಹತ್ತಿರವಾಗಿದ್ದು, ಬಳಿಕ ಸ್ನೇಹ ಬೆಳಸಿ, ಬಲವಂತವಾಗಿ ಬೆಂಗಳೂರಿನಲ್ಲಿ ಸ್ನೇಹಿತನ ರೂಮ್ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದನು. ನಂತರ ಇದು ಇತರರಿಗೆ ತಿಳಿಸಿದರೆ ಕೊಲೆ ಬೆದರಿಕೆ ಹಾಕಿದ್ದನು ಎಂದು ದೂರಲಾಗಿದೆ.
ಕೆಲ ದಿನಗಳ ಬಳಿಕ ಬಯೋಲಜಿ ಉಪನ್ಯಾಸಕ ಸಂದೀಪ್ ಕೂಡ ಯುವತಿಗೆ ಲೈಂಗಿಕ ಒತ್ತಡ ತರುತ್ತಿದ್ದ. ವಿದ್ಯಾರ್ಥಿನಿ ವಿರೋಧ ವ್ಯಕ್ತಪಡಿಸಿದಾಗ, “ನೀನು ನರೇಂದ್ರ ಜೊತೆ ಇರುವ ಫೋಟೋ-ವೀಡಿಯೋ ನನ್ನ ಬಳಿ ಇದೆ” ಎಂದು ಬೆದರಿಸಿ ಬ್ಲಾಕ್ಮೇಲ್ ಮಾಡಿ ಅತ್ಯಾಚಾರ ಎಸಗಿದ್ದನು. ಸಂದೀಪ್ ಕೂಡ ಈ ಕೃತ್ಯಕ್ಕಾಗಿ ಸ್ನೇಹಿತ ಅನೂಪ್ನ ರೂಮ್ನ್ನು ಬಳಸಿದ್ದ ಎನ್ನಲಾಗಿದೆ. ಇನ್ನೊಂದೆಡೆ ಅನೂಪ್ ಸಹ ವಿದ್ಯಾರ್ಥಿನಿಯನ್ನು “ನೀನು ನನ್ನ ರೂಮ್ಗೆ ಬಂದಿರುವುದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ” ಎಂದು ಬೆದರಿಸಿ, ಅವಳ ಮೇಲೆಯೂ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ.
ಈ ಕುರಿತು ವಿದ್ಯಾರ್ಥಿನಿ ಪೋಷಕರಿಗೆ ತಿಳಿಸಿದ್ದಾಳೆ. ಪೋಷಕರು ಮಹಿಳಾ ಆಯೋಗವನ್ನು ಸಂಪರ್ಕಿಸಿದ್ದು, ಅಲ್ಲಿಂದ ವಿದ್ಯಾರ್ಥಿನಿಗೆ ಕೌನ್ಸೆಲಿಂಗ್ ನೀಡಿ ಮಾರತ್ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆ ಮುಂದುವರೆಸುತ್ತಿದ್ದಾರೆ.