ಮಂಗಳೂರು: ಅನಾರೋಗ್ಯ ಪೀಡಿತ ಸಹಪಾಠಿಯೊಬ್ಬನ ಆರೋಗ್ಯ ವಿಚಾರಿಸಲು ಆತನ ಮನೆಗೆ ತೆರಳುತ್ತಿದ್ದ ವಿಭಿನ್ನ ಕೋಮಿನ ವಿದ್ಯಾರ್ಥಿಗಳ ತಂಡವನ್ನು ತಡೆದು ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ನಡೆಸಿದ್ದು, ತಕ್ಷಣ ಕಾರ್ಯಪ್ರವೃತ್ತವಾದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಲ್ಲೆಗೊಳಗಾದ ವಿದ್ಯಾರ್ಥಿಯು ತನ್ನ ಸಹಪಾಠಿಯೊಬ್ಬ ಅನಾರೋಗ್ಯದಿಂದ ಮನೆಯಲ್ಲಿದ್ದ ಹಿನ್ನೆಲೆಯಲ್ಲಿ, ಆತನ ಆರೋಗ್ಯ ವಿಚಾರಿಸಲು ಇತರ ಒಂಬತ್ತು ಸಹಪಾಠಿ ವಿದ್ಯಾರ್ಥಿ ಹಾಗೂ ವಿಧ್ಯಾರ್ಥಿನಿಯರೊಂದಿಗೆ ಇಂದು ಬೆಳಗ್ಗೆ ಕಾಲೇಜಿನಿಂದ ಉಪ್ಪಿನಂಗಡಿಯ ಪೆರಿಯಡ್ಕ ಕಡೆ ನಡೆದುಕೊಂಡು ಹೋಗುತ್ತಿದ್ದಾಗ ಘಟನೆ ನಡೆದಿದೆ.

ಆ ಸಮಯದಲ್ಲಿ ಮೋಟಾರ್ ಸೈಕಲ್‌ನಲ್ಲಿ ಬಂದ ಮುಸ್ತಾಫ ಮತ್ತು ಮುಸ್ತಾಫ ಪೆರಿಯಡ್ಕ ಎಂಬಿಬ್ಬರು ವಿದ್ಯಾರ್ಥಿ ತಂಡವನ್ನು ತಡೆದು ನಿಲ್ಲಿಸಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳ ಹೆಸರು, ಕಾಲೇಜು ಹಾಗೂ ಊರಿನ ಬಗ್ಗೆ ವಿಚಾರಿಸಿ, ವಿಭಿನ್ನ ಕೋಮುಗಳ ವಿದ್ಯಾರ್ಥಿಗಳು ಒಟ್ಟಿಗೆ ತೆರಳುತ್ತಿರುವ ಬಗ್ಗೆ ತಕರಾರು ತೆಗೆದಿದ್ದಾರೆ. ಅಲ್ಲದೇ ಕೋಮುದ್ವೇಷದಿಂದ ಅವಾಚ್ಯವಾಗಿ ಬೈದು, ಒಬ್ಬ ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದಾರೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಬಿಎನ್ ಎಸ್ 126(2), 352, 351(2), 115(2), 353(2) ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆರೋಪಿತರಾದ ಮುಸ್ತಾಫ ಮತ್ತು ಮುಸ್ತಾಫ ಪೆರಿಯಡ್ಕನನ್ನ ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ.
