ಲೀಡರ್ಸ್ ರಿಪೋರ್ಟ್
ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಿರ್ಮಾಣಗೊಂಡಿರುವ ಪರಶುರಾಮ ಥೀಂ ಪಾರ್ಕ್ನಲ್ಲಿ ಪ್ರತಿಷ್ಠಾಪಿಸಲಾದ ಮೂರ್ತಿಗೆ ಸಂಬಂಧಿಸಿದ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯ ತನಿಖೆಯ ಬಳಿಕ ಅಧಿಕಾರಿಗಳು ಕಾರ್ಕಳ ಕೋರ್ಟ್ಗೆ 1231 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.

2024ರ ಜೂನ್ 21ರಂದು ಕೃಷ್ಣ ಶೆಟ್ಟಿ ಎಂಬುವವರು “ನಕಲಿ ಮೂರ್ತಿ”ಯ ಕುರಿತು ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ತಜ್ಞರ ಪರಿಶೀಲನೆ ಮತ್ತು ಪೊಲೀಸರು ನಡೆಸಿದ ತನಿಖೆಯಿಂದ, ಮೂರ್ತಿ ಹಿತ್ತಾಳೆಯಿಂದ (bronze) ಮಾಡಲಾಗಿದೆ ಎಂದು ದೃಢಪಡಿಸಲಾಗಿದೆ.

ಇದಕ್ಕೆ ಮೊದಲು ಕಾಂಗ್ರೆಸ್ ಮುಖಂಡರು ಮೂರ್ತಿ ರಟ್ಟು, ಫೈಬರ್ ಅಥವಾ ಪ್ಲಾಸ್ಟಿಕ್ನಿಂದ ತಯಾರಿಸಲಾಗಿದೆ ಎಂದು ಆರೋಪಿಸುತ್ತಿದ್ದರೆ, ಬಿಜೆಪಿಯವರು ಅದನ್ನು ಕಂಚಿನ ಮೂರ್ತಿಯಾಗಿದ್ದು, ಕಾಂಗ್ರೆಸ್ ನದ್ದು ಸುಳ್ಳು ಆರೋಪವೆಂದು ಪ್ರತಿಪಾದಿಸಿದ್ದರು.

ವಿವಾದಿತ ಮೂರ್ತಿಯನ್ನು ಕಾರ್ಕಳದ ಕೃಷ್ಣ ನಾಯಕ್ ಅವರ “ಕ್ರಿಶ್ ಆರ್ಟ್ ವರ್ಲ್ಡ್” ನಲ್ಲಿ ನಿರ್ಮಿಸಲಾಗಿತ್ತು. ಈ ಮೂರ್ತಿಯ ಕಾಮಗಾರಿಯನ್ನು ಉಡುಪಿ ಜಿಲ್ಲೆಯ ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ನಡೆಸಲಾಗಿತ್ತು. ಈ ಯೋಜನೆಯು ಕಾರ್ಕಳ ಶಾಸಕ ಮತ್ತು ಮಾಜಿ ಸಚಿವ ಸುನೀಲ್ ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಆಗಿದ್ದು, 2023ರ ಜನವರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೂರ್ತಿಯನ್ನು ಅಧಿಕೃತವಾಗಿ ಉದ್ಘಾಟಿಸಿದ್ದರು. ಪ್ರಸ್ತುತ, ಅರೆಮೂರ್ತಿಯನ್ನು ತೆರವುಗೊಳಿಸಿ ಶೆಡ್ನಲ್ಲಿ ಇರಿಸಿ, ಬಳಿಕ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಪೊಲೀಸರ ತನಿಖೆಯಲ್ಲಿ ಶಿಲ್ಪಿ ಕೃಷ್ಣ ನಾಯಕ್, ನಿರ್ಮಿತಿ ಕೇಂದ್ರದ ಅರುಣ್ ಮತ್ತು ಸಚಿನ್ ಅವರ ವಿರುದ್ಧ ನಂಬಿಕೆ ದ್ರೋಹ, ವಂಚನೆ, ಒಳಸಂಚು ಹಾಗೂ ಸಾಕ್ಷ್ಯ ನಾಶ ಮಾಡಿದ ಪ್ರಕರಣಗಳು ದಾಖಲಾಗಿವೆ. ವಿಚಾರಣೆಗೆ ಮುಂದಾದ ಪೊಲೀಸರು ಆರೋಪಿತರ ವಿರುದ್ಧ ಸಾಕ್ಷ್ಯಾಧಾರಗಳೊಂದಿಗೆ ಚಾರ್ಜ್ಶೀಟ್ ದಾಖಲಿಸಿದ್ದಾರೆ.
‘ಪ್ರತಿಮೆ ಫೈಬರ್ ದು ಎಂಬ ವ್ಯವಸ್ಥಿತ ಪಿತೂರಿಗೆ ಸೋಲಾಗಿದೆ’: ಸುನೀಲ್ ಕುಮಾರ್
ಪರಶುರಾಮ ಥೀಂ ಪಾರ್ಕ್ ಹಾಗೂ ಪ್ರತಿಮೆಯ ಬಗ್ಗೆ ಕಾಂಗ್ರೆಸಿಗರು ನಡೆಸುತ್ತಿದ್ದ ನಿರಂತರ ಅಪಮಾನಕ್ಕೆ ಸೋಲಾಗಿದೆ.
ಪ್ರತಿಮೆ ಫೈಬರ್ ದು ಎಂದು ನಡೆಸುತ್ತಿದ್ದ ಟೂಲ್ ಕಿಟ್ ಅಪಪ್ರಚಾರ ಸುಳ್ಳು ಎಂಬುದು ಪೊಲೀಸ್ ತನಿಖೆಯಿಂದಲೇ ಸಾಬೀತಾಗಿದೆ. ಪ್ರತಿಮೆಯನ್ನು ಹಿತ್ತಾಳೆಯಿಂದ ನಿರ್ಮಿಸಲಾಗಿದೆ ಎಂದು ಕಾರ್ಕಳ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಜತೆಗೆ ಪರಶುರಾಮನ ಪ್ರತಿಮೆಯ ಸೊಂಟದ ಮೇಲ್ಭಾಗವನ್ನು ಮರು ವಿನ್ಯಾಸ ಉದ್ದೇಶದಿಂದ ತೆಗೆದಿದ್ದು ಎಂಬುದನ್ನೂ ನ್ಯಾಯಲಯಕ್ಕೆ ಸ್ಪಷ್ಟಪಡಿಸಿದ್ದಾರೆ. ಇದರಿಂದ ಪ್ರತಿಮೆ ಫೈಬರ್ ದು ಎಂಬ ವ್ಯವಸ್ಥಿತ ಪಿತೂರಿಗೆ ಸೋಲಾಗಿದೆ.
ಇನ್ನಾದರೂ ರಾಜ್ಯ ಸರ್ಕಾರ ಪರಶುರಾಮ ಥೀಂ ಪಾರ್ಕ್ ಗೆ ನಿಗದಿ ಮಾಡಿದ್ದ ಅನುದಾನವನ್ನು ಬಿಡುಗಡೆ ಮಾಡುವ ಜತೆಗೆ ಈ ತಾಣವನ್ನು ಪ್ರವಾಸೋದ್ಯಮಕ್ಕೆ ಮತ್ತೆ ತೆರೆಯಬೇಕು. ಅಭಿವೃದ್ಧಿ ವಿಚಾರದಲ್ಲಿ ನಡೆಸುವ ದ್ವೇಷದ ರಾಜಕಾರಣಕ್ಕೆ ತೆರೆ ಬೀಳಬೇಕೆಂದು ಒತ್ತಾಯಿಸುತ್ತೇನೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.