ಡಿಜಿಟಲ್ ಟೆಕ್
ಮಂಗಳೂರು: ಉಳ್ಳಾಲ ತಾಲೂಕಿನ ಕುಂಪಲ ಪ್ರದೇಶದಲ್ಲಿ ದೇಹಕ್ಕೆ ಗಂಭೀರ ಗಾಯವಾದ ರಕ್ತಸಿಕ್ತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಪ್ರಾಥಮಿಕವಾಗಿ ಪ್ರಾಣಿ ದಾಳಿಯ ಅನುಮಾನ ವ್ಯಕ್ತಪಡಿಸಿದ್ದಾರೆ.

ಕುಂಪಲ ನಿವಾಸಿ ದಯಾನಂದ (60) ಎಂದು ಗುರುತಿಸಲಾಗಿದ್ದು, ರಕ್ತಸಿಕ್ತವಾದ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬೆಳಿಗ್ಗೆ ಸುಮಾರು 3 ಗಂಟೆಯ ವೇಳೆಗೆ ಕೆಲವರು ಅವರು ನಡೆದುಕೊಂಡು ಹೋಗುತ್ತಿರುವುದನ್ನ ನೋಡಿದ್ದು, ಬಳಿಕ ಅದೇ ಪ್ರದೇಶದಲ್ಲಿ ಅವರ ಮೃತದೇಹ ಪತ್ತೆಯಾಗಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮೃತದೇಹದ ಮೇಲೆ ಕಂಡುಬಂದ ಗಾಯಗಳ ಸ್ವರೂಪವನ್ನು ಆಧರಿಸಿ ಪ್ರಾಣಿ ದಾಳಿ ಸಂಭವಿಸಿರುವ ಸಾಧ್ಯತೆಯನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ಸ್ಪಷ್ಟತೆ ಪಡೆಯಲು ಎಫ್ಎಸ್ಎಲ್ ತಂಡ ಸ್ಥಳಕ್ಕೆ ಆಗಮಿಸಿದೆ. ಜೊತೆಗೆ, ಗಾಯಗಳ ಸ್ವರೂಪ ಹಾಗೂ ಸಾವಿನ ನಿಖರ ಕಾರಣ ತಿಳಿಯಲು ಫಾರೆನ್ಸಿಕ್ ವೈದ್ಯರ ಅಭಿಪ್ರಾಯವನ್ನೂ ಕೇಳಲಾಗಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.


















