ನ್ಯೂಸ್ view
ಮುಂಬೈ: ಹಿರಿಯ ನಟ ಧರ್ಮೇಂದ್ರ (89) ಅವರ ಆರೋಗ್ಯದ ಬಗ್ಗೆ ಮಾಧ್ಯಮಗಳಲ್ಲಿ ಹರಿದಾಡಿದ್ದ ಸುಳ್ಳು ಸುದ್ದಿಗಳಿಗೆ ಕುಟುಂಬದಿಂದ ಸ್ಪಷ್ಟನೆ ಬಂದಿದ್ದು, ಅವರ ಮಗಳು ಈಶಾ ಡಿಯೋಲ್ ತನ್ನ ತಂದೆ ಅರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.


ಅಪ್ಪ ಸ್ಥಿರವಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ. ದಯವಿಟ್ಟು ನಮ್ಮ ಕುಟುಂಬಕ್ಕೆ ಗೌಪ್ಯತೆ ನೀಡಿ ಎಂದು ಅವರು ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. ಮಾಧ್ಯಮಗಳು ಅತಿಯಾಗಿ ವರದಿ ಮಾಡುತ್ತಾ ತಪ್ಪು ಸುದ್ದಿಗಳನ್ನು ಹರಡುತ್ತಿವೆ. ನನ್ನ ತಂದೆ ಸ್ಥಿರವಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ. ಪಾಪಾ ಅವರ ಚೇತರಿಕೆಗೆ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

ಇದೇ ವೇಳೆ, ಧರ್ಮೇಂದ್ರ ಅವರ ಪತ್ನಿ ಹೇಮಾ ಮಾಲಿನಿ ಮಾಧ್ಯಮಗಳ ವರದಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುವುದು ಕ್ಷಮಿಸಲಾಗದಂತಹದ್ದು. ಇದು ಅವಮಾನಕರ ಹಾಗೂ ಅನುತ್ತರದಾಯಕ. ಕುಟುಂಬದ ಗೌಪ್ಯತೆಯನ್ನು ಗೌರವಿಸಿ ಎಂದು ಅವರು ಎಕ್ಸ್ (X) ನಲ್ಲಿ ಬರೆದಿದ್ದಾರೆ. ಬ್ರೀಚ್ ಕ್ಯಾಂಡಿ ಆಸ್ಪತ್ರೆ ಪ್ರತಿಕ್ರಿಯೆ ನೀಡುವುದನ್ನು ನಿರಾಕರಿಸಿದೆ. ನಾವು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ದಯವಿಟ್ಟು ಕುಟುಂಬವನ್ನು ಸಂಪರ್ಕಿಸಿ ಎಂದು ಆಸ್ಪತ್ರೆ ತಿಳಿಸಿದೆ.
ಈ ಹೇಳಿಕೆಗಳು ಧರ್ಮೇಂದ್ರ ಅವರ ನಿಧನದ ಕುರಿತ ಸುಳ್ಳು ವರದಿಗಳು ಹರಿದ ನಂತರ ಬಂದಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಯೋಗಿ ಆದಿತ್ಯನಾಥ್ ಮತ್ತು ಜಾವೇದ್ ಅಖ್ತರ್ ಸಾಮಾಜಿಕ ಜಾಲತಾಣಗಳಲ್ಲಿ ಶೋಕ ಸಂದೇಶಗಳನ್ನು ಪೋಸ್ಟ್ ಮಾಡಿದ್ದರು. ಆದರೆ ಕುಟುಂಬವು ಧರ್ಮೇಂದ್ರ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದೆ.



















