Home Blogಮಂಗಳೂರಿನಲ್ಲಿ ಶಾಂತಿ ಮಂತ್ರ: ಸರಣಿ ಹತ್ಯೆ, ಕೋಮು ಉದ್ರಿಕ್ತತೆಗೆ ಬ್ರೇಕ್ ಹಾಕಲು ಶಾಂತಿ ಸಭೆ!

ಮಂಗಳೂರಿನಲ್ಲಿ ಶಾಂತಿ ಮಂತ್ರ: ಸರಣಿ ಹತ್ಯೆ, ಕೋಮು ಉದ್ರಿಕ್ತತೆಗೆ ಬ್ರೇಕ್ ಹಾಕಲು ಶಾಂತಿ ಸಭೆ!

by diksoochikannada.com

ಮಂಗಳೂರು: ಧಾರ್ಮಿಕ ಧ್ರುವೀಕರಣ, ರಾಜಕೀಯ ಪ್ರಚೋದನೆ ಮತ್ತು ಸರಣಿ ಹತ್ಯೆಗಳಿಂದ ನಲುಗಿದ್ದ ಕಡಲ ತಡಿ ಮಂಗಳೂರು ಸದ್ಯಕ್ಕೆ ಶಾಂತಿಯತ್ತ ಮುಖ ಮಾಡಿದೆ. ಕಠಿಣ ಕ್ರಮದಿಂದಾಗಿ ಅಧಿಕಾರಿಗಳ ಬದಲಾವಣೆ ಜಿಲ್ಲೆಯ ಅಶಾಂತ ಪರಿಸ್ಥಿತಿಗೆ ತಾತ್ಕಾಲಿಕ ಬ್ರೇಕ್ ಹಾಕಿದರೂ, ಶಾಶ್ವತ ಶಾಂತಿ ಬಗ್ಗೆ ಪ್ರಶ್ನೆಗಳು ಇನ್ನೂ ಉಳಿದಿವೆ.

ಈ ಹಿನ್ನಲೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಶ್ವತ ಶಾಂತಿ ಸ್ಥಾಪನೆಗಾಗಿ ವಿಶೇಷ ಶಾಂತಿ ಸಭೆ ನಡೆಯಿತು. ಈ ಸಭೆಯಲ್ಲಿ ಸರ್ವಧರ್ಮ, ಸರ್ವಪಕ್ಷದ ಮುಖಂಡರು, ಜನಪ್ರತಿನಿಧಿಗಳು, ಉದ್ಯಮಿಗಳು, ಶಿಕ್ಷಣ ತಜ್ಞರು ಸೇರಿದಂತೆ 86 ಮಂದಿ ಗಣ್ಯರು ಭಾಗವಹಿಸಿದ್ದರು.

ಕೋಮು ಸಂಘರ್ಷದ ಹಿನ್ನೆಲೆ ಮತ್ತು ಸಾಮಾಜಿಕ ಜವಾಬ್ದಾರಿ, ಪ್ರಚೋದನಕಾರಿ ಭಾಷಣಗಳ ಪರಿಣಾಮ ಮತ್ತು ಯುವ ಜನತೆ ಮೇಲೆ ಪರಿಣಾಮ, ಶಾಂತಿ ಕಾಪಾಡಲು ಕಠಿಣ ಕ್ರಮಗಳ ಅಗತ್ಯತೆ, ಸಮಾಜದಲ್ಲಿ ಸಾಮರಸ್ಯ ಗಟ್ಟಿಯಾಗಲು ಸಂಸ್ಥೆಗಳ ಪಾತ್ರದ ಬಗ್ಗೆ ಚರ್ಚೆ ನಡೆಯಿತು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಸ್ಡಿಪಿಐ, ಸಿಪಿಎಂ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು, ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಗುರುಗಳು, ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು, ಬಿಲ್ಡರ್‌ಗಳು, ಉದ್ಯಮಿಗಳು ಸಭೆಯಲ್ಲಿ ಪಾಲ್ಗೊಂಡರು.
ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ನಾವು ಬೇರೆ ಬೇರೆ ಜಾತಿ, ಧರ್ಮ, ಪಕ್ಷದವರಾಗಿದ್ದರೂ ಪ್ರೀತಿ ಮತ್ತು ವಿಶ್ವಾಸದಿಂದ ಬದುಕಬೇಕಾಗಿದೆ. ಶಾಂತಿಯ ನಿರ್ಮಾಣಕ್ಕೆ ಪ್ರತಿಯೊಬ್ಬರೂ ತಮ್ಮ ಪಾತ್ರ ನಿಭಾಯಿಸಬೇಕು ಎಂದು ಹೇಳಿದರು.

ಶಾಂತಿ ಸಭೆಯಲ್ಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ಶರಬತ್ತು ನೀಡಿ ಕ್ರಿಕೆಟ್ ಆಡಿದರೆ ಶಾಂತಿ ಬರಲ್ಲ. ನಮ್ಮ ಮನೆಗಳಿಂದಲೇ ಸೌಹಾರ್ದತೆ ಆರಂಭವಾಗಬೇಕು ಎಂದರು. ಇದಕ್ಕೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿ, ಸಭೆಯಲ್ಲಿ ಬಹಳಷ್ಟು ಸದುದ್ದೇಶಪೂರ್ಣ ಸಲಹೆಗಳು ಬಂದಿವೆ. ಸುಳ್ಳು ಸುದ್ದಿ, ದ್ವೇಷ ಭಾಷಣಗಳ ವಿರುದ್ಧ ಮಸೂದೆ ತರಲು ಸರ್ಕಾರ ಮುಂದಾಗಲಿದೆ. ಶಾಶ್ವತ ಶಾಂತಿಗೆ ಸಮುದಾಯದ ಸಹಕಾರ ಅಗತ್ಯ‌ ಎಂದು ಹೇಳಿದರು. ಈ ನಡುವೆ ವಿಶ್ವ ಹಿಂದೂ ಪರಿಷತ್ ಮುಖಂಡರ ಮನೆಗೆ ರಾತ್ರಿ ವೇಳೆ ತೆರಳಿದ ಪೊಲೀಸರ ಕ್ರಮ, ಕೆಲವರನ್ನು ಸಭೆಗೆ ಆಹ್ವಾನಿಸದಿರುವ ವಿಚಾರಗಳು ಸಭೆಯಲ್ಲಿ ಚರ್ಚೆಗೆ ಗ್ರಾಸವಾದವು.

You may also like

Leave a Comment