ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಬಪ್ಪನಾಡು ಪ್ರದೇಶದ ಶಾಂಭವಿ ನದಿ ತೀರದಲ್ಲಿ ಮಂಗಳೂರಿನ ಉದ್ಯಮಿಯ ಪುತ್ರನ ಮೃತದೇಹ ಪತ್ತೆಯಾಗಿದೆ.

ಮೃತರನ್ನು ತಿರುವೈಲು ಗುತ್ತಿನ ನವೀನ್ ಚಂದ್ರ ಆಳ್ವ ಅವರ ಪುತ್ರ ಅಭಿಷೇಕ್ ಆಳ್ವ (29) ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಅಭಿಷೇಕ್ ಶಾಂಭವಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ನವೆಂಬರ್ 5ರ ರಾತ್ರಿ ಅಭಿಷೇಕ್ ತಮ್ಮ ಕಾರನ್ನು ಬಪ್ಪನಾಡು ಸೇತುವೆ ಬಳಿ ನಿಲ್ಲಿಸಿ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಇಂದು (ನವೆಂಬರ್ 7) ಬೆಳಿಗ್ಗೆ ಬಪ್ಪನಾಡು ಸಮೀಪದ ನದಿ ತೀರದಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಅಭಿಷೇಕ್ ತಮ್ಮ ತಂದೆಯ ಉದ್ಯಮವನ್ನು ಮುನ್ನಡೆಸುತ್ತಿದ್ದರು ಎನ್ನಲಾಗಿದೆ. ತಿರುವೈಲು ಗುತ್ತು ಕರಾವಳಿ ಕಂಬಳಗಳಲ್ಲಿ ಗುರುತಿಸಿಕೊಂಡಿದ್ದ ಪ್ರಸಿದ್ಧ ಮನೆತನವಾಗಿದೆ. ಮೃತದೇಹ ಪತ್ತೆಯ ಸಂಬಂಧ ಮಂಗಳೂರಿನ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
