Home Blogಮಂಗಳೂರು ಜೈಲು ‘ಸಿಗ್ನಲ್ ಜಾಮರ್’ ತಾಂತ್ರಿಕ ವರದಿ ಕೇಳಿದ ಹೈಕೋರ್ಟ್: ಹೈಕೋರ್ಟ್ ಮೆಟ್ಟಿಲೇರಿದ್ದ ವಕೀಲರು!

ಮಂಗಳೂರು ಜೈಲು ‘ಸಿಗ್ನಲ್ ಜಾಮರ್’ ತಾಂತ್ರಿಕ ವರದಿ ಕೇಳಿದ ಹೈಕೋರ್ಟ್: ಹೈಕೋರ್ಟ್ ಮೆಟ್ಟಿಲೇರಿದ್ದ ವಕೀಲರು!

by diksoochikannada.com

ಮಂಗಳೂರು: ಇಡೀ ಮಂಗಳೂರು ನಗರಕ್ಕೆ ಅತೀ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರೋ ಜೈಲಿನ ಮೊಬೈಲ್ ಸಿಗ್ನಲ್ ಜಾಮರ್ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಮಧ್ಯ ಪ್ರವೇಶ ಮಾಡಿದ್ದು, ಮಂಗಳೂರು ಬಾರ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಜೈಲಿನ ಸಿಗ್ನಲ್ ಜಾಮರ್ ನ ತಾಂತ್ರಿಕ ವರದಿ ಸಲ್ಲಿಕೆಗೆ ಸರ್ಕಾರಕ್ಕೆ ಸೂಚನೆ ನೀಡಿದೆ.

ಮಂಗಳೂರು ಬಾರ್ ಅಸೋಸಿಯೇಷನ್ ಸಲ್ಲಿಸಿರೋ ರಿಟ್ ಅರ್ಜಿ ವಿಚಾರಣೆ ನಡೆಸಿ ತಾಂತ್ರಿಕ ವರದಿ ಸಲ್ಲಿಕೆಗೆ ಗಡುವು ನೀಡಿ ನವೆಂಬರ್ 18ಕ್ಕೆ ವಿಚಾರಣೆ ಮುಂದೂಡಿಕೆ ಮಾಡಲಾಗಿದೆ. ಸರ್ಕಾರದ ವಕೀಲರಾದ AGA (Additional Government Advocate) ಅವರಿಗೆ ಮಾರ್ಗದರ್ಶನ ಪಡೆಯಲು ಮತ್ತು ತಮ್ಮ ಪರವಾಗಿ ಸಲ್ಲಿಸಲು ಒಂದು ವಾರದ ಸಮಯವನ್ನು ಹೈಕೋರ್ಟ್ ನೀಡಿದೆ‌‌. ಜೊತೆಗೆ ಜೈಲಿನ ಒಳಗೆ ಹಾಗೂ ಜೈಲಿನಿಂದ ನ್ಯಾಯಾಲಯದವರೆಗೆ ಬೇರೆ ಬೇರೆ ಸ್ಥಳಗಳಲ್ಲಿ ಮೊಬೈಲ್ ಸಿಗ್ನಲ್‌ ಶಕ್ತಿಯ ಬಗ್ಗೆ ತಾಂತ್ರಿಕ ವರದಿ (technical report)ಯನ್ನು ದಾಖಲಿಸಲು ಸೂಚಿಸಲಾಗಿದೆ. ಅಂದರೆ ಯಾವ ಯಾವ ಸ್ಥಳಗಳಲ್ಲಿ ಸಿಗ್ನಲ್ ಎಷ್ಟು ಬಲವಾಗಿದೆಯೆಂದು ಪರಿಶೀಲಿಸಬೇಕು ಹಾಗೂ ವರದಿಯಲ್ಲಿ ಜೈಲಿನಲ್ಲಿ ಇರುವ ಜಾಮರ್‌ಗಳು (signal jammers) ಮೊಬೈಲ್ ಸಿಗ್ನಲ್‌ಗಳ ಮೇಲೆ ಯಾವುದೇ ಪರಿಣಾಮ ಬೀರಿವೆಯೇ ಎಂಬುದನ್ನೂ ಸ್ಪಷ್ಟವಾಗಿ ಉಲ್ಲೇಖಿಸಬೇಕು ಎಂದು ಹೈಕೋರ್ಟ್ ಪೀಠ ಸೂಚಿಸಿದೆ. ಈ ಮೂಲಕ ಜೈಲಿನ ಒಳಗೂ ಹೊರಗೂ ಮೊಬೈಲ್ ಸಿಗ್ನಲ್ ಸ್ಥಿತಿ ಮತ್ತು ಜಾಮರ್‌ಗಳ ಪರಿಣಾಮದ ಬಗ್ಗೆ ತಾಂತ್ರಿಕ ವರದಿ ಸಲ್ಲಿಸಲು ಹೇಳಿದೆ.

ಮಂಗಳೂರು ಕೋರ್ಟ್ ನಲ್ಲೂ ನೆಟ್ ವರ್ಕ್ ಜಾಮ್: ಹೈಕೋರ್ಟ್ ಮೆಟ್ಟಿಲೇರಿದ್ದ ವಕೀಲರು!

ಮಂಗಳೂರು ಜೈಲಿನವರೆಗೂ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಇದ್ದ ಕಾರಣದಿಂದ ಮಂಗಳೂರು ವಕೀಲರ ಸಂಘ ಹೈಕೋರ್ಟ್ ನಲ್ಲಿ ರಿಟ್ ಪಿಟಿಷನ್ ಸಲ್ಲಿಸಿತ್ತು. ಈ ರಿಟ್ ಪಿಟಿಷನ್‌ನಲ್ಲಿ ಜೈಲಿನಲ್ಲಿ ಅಳವಡಿಸಿದ ಸಿಗ್ನಲ್ ಜಾಮರ್‌ಗಳು (signal jammers) ಮಂಗಳೂರು ಜಿಲ್ಲಾ ನ್ಯಾಯಾಲಯದ ಆವರಣದೊಳಗೆ ಹಾಗೂ ಹೊರಗಿನ ಪ್ರದೇಶಗಳಲ್ಲಿ ಟೆಲಿಫೋನ್ ಮತ್ತು ಇಂಟರ್ನೆಟ್ ಸಂಪರ್ಕವನ್ನು ಅಡ್ಡಿಪಡಿಸುತ್ತಿವೆ ಎಂದು ದೂರಲಾಗಿತ್ತು. ಇದು ಯಾವುದೇ ಕಾನೂನು ಆಧಾರವಿಲ್ಲದ ಮತ್ತು ಅಕ್ರಮ ಕ್ರಮ ಎಂದು ಘೋಷಿಸಲು ಹೈಕೋರ್ಟ್ ಗೆ ಮನವಿ ಮಾಡಿದ್ದರು. ಅದರ ಪರಿಣಾಮವಾಗಿ ನ್ಯಾಯಾಲಯವು ಸರ್ಕಾರ ಅಥವಾ ಸಂಬಂಧಿತ ಪ್ರತಿವಾದಿಗಳಿಗೆ ಆ ಜಾಮರ್‌ಗಳನ್ನು ಅಥವಾ ಇತರ ಉಪಕರಣಗಳನ್ನು ತೆಗೆದುಹಾಕುವಂತೆ ಆದೇಶಿಸಬೇಕು ಎಂದು ವಿನಂತಿಸಿದ್ದರು. ಅವು ಮಂಗಳೂರು ನ್ಯಾಯಾಲಯ ಆವರಣದೊಳಗಿನ ಸಂವಹನ ಚಾನಲ್‌ಗಳು ಹಾಗೂ ಇಂಟರ್ನೆಟ್ ಸೇವೆಗಳ ಮೇಲೆ ದುಷ್ಪರಿಣಾಮ ಬೀರುತ್ತಿವೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು. ಜಿಲ್ಲಾ ನ್ಯಾಯಾಲಯದ ಆವರಣದೊಳಗೆ ನಿರಂತರ ಹಾಗೂ ಗುಣಮಟ್ಟದ ಇಂಟರ್ನೆಟ್ ಸೇವೆ ಲಭ್ಯವಾಗುವಂತೆ ಎಲ್ಲಾ ಅಡ್ಡಿಗಳು, ಅಡೆತಡೆಗಳು ಮತ್ತು ವ್ಯತ್ಯಯಗಳನ್ನು ತೆಗೆದುಹಾಕುವಂತೆ ಸರ್ಕಾರಕ್ಕೆ ಆದೇಶಿಸಲು ಕೋರಿದ್ದರು. ತಾತ್ಕಾಲಿಕವಾಗಿ (interim order) ಕೂಡಾ ಸರ್ಕಾರಕ್ಕೆ ಜಾಮರ್‌ಗಳನ್ನು ತೆಗೆದುಹಾಕುವಂತೆ ತಕ್ಷಣದ ಆದೇಶ ನೀಡಬೇಕು, ಮಂಗಳೂರು ನ್ಯಾಯಾಲಯದ ಆವರಣದೊಳಗಿನ ಇಂಟರ್ನೆಟ್ ಹಾಗೂ ಸಂವಹನ ಸೇವೆ ಪುನಃ ಕಾರ್ಯನಿರ್ವಹಿಸಬಹುದು ಎಂದು ವಿನಂತಿಸಿದ್ದರು. ಸದ್ಯ ಈ ಜೈಲು ಜಾಮರ್ ನಿಂದ ಮಂಗಳೂರು ಕೋರ್ಟ್ ಜೊತೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಎದುರಾಗಿದೆ. ಕಳೆದ ಎಪ್ರಿಲ್ ನಲ್ಲೇ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು.

You may also like

Leave a Comment