ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಕ್ರಮ ಗೋ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವುಗಳ ಹತ್ಯೆಗೆ ಉದ್ದೇಶಿಸಲಾಗಿದ್ದ ಗೋ ಕಳ್ಳರ ಮನೆ ಹಾಗೂ ಗೋಡೌನ್ ಒಂದನ್ನು ಧರ್ಮಸ್ಥಳ ಪೊಲೀಸರು ಜಪ್ತಿ ಮಾಡುವ ಮೂಲಕ ಅಕ್ರಮ ಗೋ ಸಾಗಾಟಗಾರರಿಗೆ ಬಿಸಿ ಮುಟ್ಟಿಸಿದ್ದಾರೆ.

ಕರ್ನಾಟಕ ಗೋಹತ್ಯೆ ನಿಷೇಧ ಕಾಯಿದೆ, 2020ರ ಕಲಂ 5 ಮತ್ತು 12, ಹಾಗೂ ಪ್ರಾಣಿ ಹಿಂಸೆ ತಡೆ ಕಾಯಿದೆ (ಕಲಂ 11(1)(ಡಿ)) ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿಗಳಾದ ಇಬ್ರಾಹಿಂ ಖಲೀಲ್ ಹಾಗೂ ಮಹಮ್ಮದ್ ಸಿನಾನ್ ವಿರುದ್ಧ ತನಿಖೆ ನಡೆಯುತ್ತಿದೆ. ತನಿಖೆಯ ಭಾಗವಾಗಿ ಇಬ್ರಾಹಿಂ ಖಲೀಲ್ ಅಕ್ರಮವಾಗಿ ಜಾನುವಾರುಗಳನ್ನು ಮಾಂಸ ಮಾಡಲು ಉದ್ದೇಶಿಸಿದ್ದ ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ ತಂಚಿಬೆಟ್ಟು ಪ್ರದೇಶದಲ್ಲಿರುವ ಮನೆ ಹಾಗೂ ಮಹಮ್ಮದ್ ಸಿನಾನ್ ಮಾಂಸ ಇಡಲು ಉದ್ದೇಶಿಸಿದ್ದ ಸಜಿಪಪಡು ಗ್ರಾಮದ ಕೋಟೆಕಣಿ ಪ್ರದೇಶದಲ್ಲಿರುವ ಕೋಣೆಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಪೊಲೀಸರು ಪ್ರಕರಣದ ಸಂಬಂಧ ಹೆಚ್ಚಿನ ತನಿಖೆ ಮುಂದುವರಿಸಿದ್ದು, ಅಕ್ರಮ ಗೋಹತ್ಯೆ ಮತ್ತು ಮಾಂಸ ವ್ಯಾಪಾರದ ಸಂಪರ್ಕಗಳನ್ನು ಪತ್ತೆಹಚ್ಚಲು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ಅಕ್ರಮ ಗೋ ಸಾಗಟ ತಡೆದಿದ್ದ ಧರ್ಮಸ್ಥಳ ಪೊಲೀಸರು!

ಧರ್ಮಸ್ಥಳ ಠಾಣಾ ವ್ಯಾಪ್ತಿಯ ಕೊಕ್ಕಡ ಪ್ರದೇಶದಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸರು ನವೆಂಬರ್ 2ರಂದು ರಾತ್ರಿ ಸುಮಾರು 8 ಗಂಟೆಗೆ ಪಟ್ಟೂರು ಗ್ರಾಮದ ಸಮೀಪ ಪಹರೆ ನಡೆಸುತ್ತಿದ್ದ ವೇಳೆ ಸಂಶಯಾಸ್ಪದವಾಗಿ ಚಲಿಸುತ್ತಿದ್ದ KA-19-MC-5862 ರಿಜಿಸ್ಟ್ರೇಷನ್ ಸಂಖ್ಯೆಯ ರಿಟ್ಜ್ ಕಾರನ್ನು ತಡೆದಿದ್ದಾರೆ. ಕಾರನ್ನು ನಿಲ್ಲಿಸಿ ಪರಿಶೀಲಿಸಿದಾಗ ವಾಹನದ ಹಿಂಬದಿ ಸೀಟು ತೆಗೆದ ಸ್ಥಳದಲ್ಲಿ ಎರಡು ಕಪ್ಪು ಬಣ್ಣದ ಕರುಗಳು ಮತ್ತು ಒಂದು ಕಪ್ಪು-ಬಿಳಿ ಮಿಶ್ರಿತ ಕರು ಪತ್ತೆಯಾಗಿದೆ. ವಾಹನವನ್ನು ಚಲಾಯಿಸುತ್ತಿದ್ದ ವ್ಯಕ್ತಿ ಮಹಮ್ಮದ್ ಸಿನಾನ್ (25), ತಂದೆ: ಮಹಮ್ಮದ್, ನಿವಾಸಿ: ಕೋಟೆಕನಿ ಮನೆ, ಸಜಿಪ ಪಡು ಗ್ರಾಮ, ಉಳ್ಳಾಲ ತಾಲೂಕು ಎಂದು ಗುರುತಿಸಲ್ಪಟ್ಟಿದ್ದು, ಪಕ್ಕದಲ್ಲಿದ್ದ ಇಬ್ರಾಹಿಂ ಖಲೀಲ್ ಅಲಿಯಾಸ್ ತೌಸೀಫ್ (38), ತಂದೆ: ಮಹಮ್ಮದ್, ನಿವಾಸಿ: ತಂಚಿಬೆಟ್ಟು ಮನೆ, ಸಜಿಪನಡು ಗ್ರಾಮ, ಉಳ್ಳಾಲ ತಾಲೂಕು ಎಂದು ಪೊಲೀಸರು ತಿಳಿಸಿದ್ದಾರೆ. ಅವರಿಂದ ಜಾನುವಾರು ಸಾಗಾಟಕ್ಕೆ ಅಗತ್ಯವಾದ ಪರವಾನಿಗೆ ಕುರಿತು ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲದೆ ಸಾಗಾಟ ಮಾಡುತ್ತಿರುವುದು ಬಹಿರಂಗವಾಗಿದೆ. ಮುಂದಿನ ವಿಚಾರಣೆಯಲ್ಲಿ, ಅವರು ಪಟ್ರಮೆ ಗ್ರಾಮದ ಜೋಹಾರ ಪಟ್ಟೂರು ಎಂಬವರಿಂದ ಕರುಗಳನ್ನು ಖರೀದಿಸಿ ಮಾಂಸ ಮಾಡಲು ತೆಗೆದುಕೊಂಡು ಹೋಗುತ್ತಿದ್ದರೆಂದು ಒಪ್ಪಿಕೊಂಡಿದ್ದಾರೆ. ಪೊಲೀಸರು ಸುಮಾರು ರೂ. 20,000 ಮೌಲ್ಯದ ಮೂರು ಕರುಗಳು ಹಾಗೂ ರೂ. 2 ಲಕ್ಷ ಮೌಲ್ಯದ ರಿಟ್ಜ್ ಕಾರು ವಶಪಡಿಸಿಕೊಂಡಿದ್ದರು.
