ಮಂಗಳೂರು: ಮಂಗಳೂರು ಹೊರವಲಯದ ಬಜಪೆ ಕಂದಾವರದ ಸೌಹಾರ್ದ ನಗರದಲ್ಲಿ ಬೆಳಿಗ್ಗೆ ಸಂಭವಿಸಿದ ಘಟನೆಯಲ್ಲಿ ಬೀದಿ ನಾಯಿ ದಾಳಿಗೆ ಸಿಕ್ಕು ಆರು ವರ್ಷದ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

ಸೌಹಾರ್ದ ನಗರದ ನಿವಾಸಿ ಮುಹಮ್ಮದ್ ಅಝರ್ ಅವರ ಪುತ್ರ ಅಹಿಲ್ (6) ಎಂಬ ಬಾಲಕನ ಮೇಲೆ ಬೆಳಗ್ಗೆ ಸುಮಾರು 7:30 ಕ್ಕೆ ಮದರಸದಿಂದ ಮನೆಗೆ ಹಿಂತಿರುಗುವ ವೇಳೆ ಬೀದಿನಾಯಿ ದಾಳಿ ನಡೆಸಿದೆ.

ಈ ವೇಳೆ ಬಾಲಕನ ಕೆನ್ನೆ ಹಾಗೂ ಕೈ ಭಾಗಕ್ಕೆ ತೀವ್ರ ಗಾಯಗಳಾಗಿವೆ. ಬಾಲಕನ ಬೊಬ್ಬೆ ಕೇಳಿ ಹೊರಗೆ ಬಂದ ತಾಯಿ ಪುತ್ರನನ್ನು ರಕ್ಷಿಸಿದ್ದು, ತಕ್ಷಣವೇ ಬಜಪೆ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಟೀಲಿನ ದುರ್ಗ ಸಂಜೀವಿನಿ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸ್ಥಳೀಯರು ಕಳೆದ ಮೂರು ವರ್ಷಗಳಿಂದ ಕಂದಾವರ ಗ್ರಾಮ ಪಂಚಾಯತಿಗೆ ಬೀದಿನಾಯಿಗಳ ಕಾಟದ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದಾಗಿ ಆರೋಪಿಸಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಬೀದಿನಾಯಿಗಳ ನಿಯಂತ್ರಣ ಮತ್ತು ಮಕ್ಕಳ ಸುರಕ್ಷತೆಗಾಗಿ ತುರ್ತು ಕ್ರಮ ಕೈಗೊಳ್ಳುವಂತೆ ನಿವಾಸಿಗಳು ಆಡಳಿತಕ್ಕೆ ಆಗ್ರಹಿಸಿದ್ದಾರೆ.
