Home Blogಕಾಸರಗೋಡು-ಮಂಗಳೂರು ಸಂಚಾರಕ್ಕೆ ಮತ್ತೊಂದು ಟೋಲ್ ಫಿಕ್ಸ್: ನ.12(ನಾಳೆ) ರಿಂದ ಕುಂಬಳೆಯಲ್ಲಿ ಟೋಲ್ ಸಂಗ್ರಹ!

ಕಾಸರಗೋಡು-ಮಂಗಳೂರು ಸಂಚಾರಕ್ಕೆ ಮತ್ತೊಂದು ಟೋಲ್ ಫಿಕ್ಸ್: ನ.12(ನಾಳೆ) ರಿಂದ ಕುಂಬಳೆಯಲ್ಲಿ ಟೋಲ್ ಸಂಗ್ರಹ!

by diksoochikannada.com

ಕಾಸರಗೋಡು: ಭಾರೀ ಪ್ರತಿಭಟನೆ ಹಾಗೂ ಕಾನೂನು ಹೋರಾಟಗಳ ಮಧ್ಯೆಯೂ ನಾಳೆಯಿಂದ ಕುಂಬಳೆಯಲ್ಲಿ ನೂತನವಾಗಿ ನಿರ್ಮಿಸಲಾದ ಟೋಲ್ ಗೇಟ್ ನಲ್ಲಿ ಟೋಲ್ ಸಂಗ್ರಹ ಆರಂಭವಾಗಲಿದೆ. ಅರಿಕ್ಕಾಡಿ (ಕುಂಬಳೆ) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಟೋಲ್‌ಗೇಟ್‌ನಲ್ಲಿ ವಾಹನ ಸವಾರರಿಂದ ಬಳಕೆದಾರ ಶುಲ್ಕ (ಟೋಲ್‌ ಫೀ) ಸಂಗ್ರಹಣೆ ನವೆಂಬರ್ 12, 2025ರಂದು ಬೆಳಿಗ್ಗೆ 8 ಗಂಟೆಯಿಂದ ಆರಂಭಗೊಳ್ಳಲಿದೆ.

ನ್ಯಾಯಾಲಯದ ಅಭಿಪ್ರಾಯಗಳು ಮತ್ತು ಸಾರ್ವಜನಿಕ ಪ್ರತಿಭಟನೆಗಳನ್ನು ಲೆಕ್ಕಿಸದೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಶುಲ್ಕ ವಸೂಲಿ ಪ್ರಾರಂಭಿಸಲು ಸಜ್ಜಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಕಾಸರಗೋಡು ಜಿಲ್ಲೆಯ ಸಾಮಾನ್ಯ ಪ್ರಯಾಣಿಕರ ಮೇಲೆ ಇದು ಭಾರೀ ಆರ್ಥಿಕ ಹೊರೆ ಉಂಟುಮಾಡುವ ಸಾಧ್ಯತೆ ವ್ಯಕ್ತವಾಗಿದೆ. ಅರಿಕ್ಕಾಡಿ ಟೋಲ್‌ಗೇಟ್ ನಿರ್ಮಾಣದ ಕುರಿತು “ಆಂಟಿ-ಟೋಲ್ ಆಕ್ಷನ್ ಸಮಿತಿ” ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಪ್ರಕರಣ ಇನ್ನೂ ವಿಚಾರಣೆಯಲ್ಲಿದೆ. ಈ ನಡುವೆ ನ್ಯಾಯಾಲಯವು ಆ ಪ್ರಕರಣವನ್ನು ಪರಿಗಣಿಸುತ್ತಿರುವ ವೇಳೆ ಟೋಲ್ ವಸೂಲಿ ಪ್ರಾರಂಭಿಸುವುದು ನ್ಯಾಯೋಚಿತವಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಇದೇ ವೇಳೆ ತಲಪಾಡಿ ಟೋಲ್‌ಪ್ಲಾಜಾ ಮತ್ತು ಅರಿಕ್ಕಾಡಿ ಟೋಲ್‌ಪ್ಲಾಜಾಗಳ ಮಧ್ಯದ ಅಂತರ ಕೇವಲ 22 ಕಿಮೀ ಆಗಿದ್ದು, 60 ಕಿಮೀ ವ್ಯಾಪ್ತಿಯೊಳಗೆ ಒಂದೇ ಟೋಲ್ ಇರಬೇಕು ಎನ್ನುವ ಕೇಂದ್ರ ಸರ್ಕಾರದ ನಿಯಮಕ್ಕೆ ಇದು ವಿರುದ್ಧವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಧಿಕಾರಿಗಳು ಈಗಾಗಲೇ ಟೋಲ್‌ಗೇಟ್ ಕಾಮಗಾರಿ ಪೂರ್ಣಗೊಳಿಸಿದ್ದು, ಕಳೆದ ವಾರದಿಂದ ಪ್ರಯೋಗಾತ್ಮಕವಾಗಿ ವಾಹನ ಸಂಚಾರ ನಡೆಸಿದ್ದಾರೆ. ಕೇಂದ್ರ ಸರ್ಕಾರದ ವಿಶೇಷ ಅನುಮತಿ ಬಾರದಿದ್ದರೂ ವಸೂಲಿ ಪ್ರಾರಂಭಿಸಲು ಎನ್‌ಎಚ್‌ಎಐಗೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ದೊರೆತಿದೆ. ಮಂಗಳೂರು–ಕಾಸರಗೋಡು ನಡುವಿನ ಪ್ರಯಾಣಿಕರು ಬುಧವಾರದಿಂದ ಜಾರಿಗೊಳ್ಳುವ ಟೋಲ್ ದರಗಳಿಂದ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.

ಟೋಲ್ ದರಗಳು:

ಕಾರು, ಜೀಪ್, ವ್ಯಾನ್ ಮುಂತಾದ ಸಣ್ಣ ವಾಹನಗಳಿಗೆ ಒಂದು ಮಾರ್ಗಕ್ಕೆ ₹85, 24 ಗಂಟೆಯೊಳಗೆ ಹಿಂತಿರುಗಿದರೆ ₹130, ತಲಪಾಡಿ ಟೋಲ್‌ಗೇಟ್‌ನ ₹80 ಸೇರಿಸಿದರೆ ಮಂಗಳೂರು–ಕಾಸರಗೋಡು ಪ್ರಯಾಣಕ್ಕೆ ದಿನಕ್ಕೆ ₹210 ಟೋಲ್ ವೆಚ್ಚವಾಗಲಿದೆ. ಮಿನಿಬಸ್‌ಗಳಿಗೆ ಒಂದು ಮಾರ್ಗಕ್ಕೆ ₹140 ಮತ್ತು ಹಿಂತಿರುಗಲು ₹210 ವಿಧಿಸಲಾಗುತ್ತದೆ. ಬಸ್ ಮತ್ತು ಲಾರಿಗಳಿಗೆ ಕ್ರಮವಾಗಿ ₹295 ಹಾಗೂ ₹440 ಟೋಲ್ ನಿಗದಿಯಾಗಿದೆ. ಕುಂಬಳೆ, ಮಂಗಲ್ಪಾಡಿ, ಮಂಜೇಶ್ವರ, ಮೊಗ್ರಲ್ಪುತ್ತೂರು ಮೊದಲಾದ ಪಂಚಾಯತ್‌ಗಳ ವ್ಯಾಪಾರಿಗಳು ಹಾಗೂ ನಿತ್ಯ ಪ್ರಯಾಣಿಕರು ಈ ದ್ವಿಟೋಲ್ ಭಾರವನ್ನು ಸಹಿಸಲು ಅಸಾಧ್ಯ ಎಂದು ಹೇಳುತ್ತಿದ್ದಾರೆ. ಈ ಹಣದಲ್ಲಿ ರೈಲು ಅಥವಾ ಬಸ್ ಮೂಲಕ ಮಂಗಳೂರು ಹೋಗಿಬರಬಹುದಾಗಿದೆ.

20 ಕಿಮೀ ವ್ಯಾಪ್ತಿಯೊಳಗೆ ವಿನಾಯಿತಿ!

ವಾಣಿಜ್ಯೇತರ ವಾಹನ ಮಾಲೀಕರು ಮಾತ್ರ ವಿನಾಯಿತಿಗೆ ಅರ್ಹರು. ಅವರಿಗೆ ಮಾಸಿಕ ಪಾಸ್‌ಗಾಗಿ ₹340 ಪಾವತಿಸಬೇಕು. ಆದರೆ, ಪ್ರತಿಭಟನಾಕಾರರ ಅಭಿಪ್ರಾಯದ ಪ್ರಕಾರ ಈ ಟೋಲ್‌ ವಸೂಲಿ ಅನಧಿಕೃತವಾಗಿದೆ ಮತ್ತು ಅವರು ಬುಧವಾರ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ‌

You may also like

Leave a Comment