ಬೆಂಗಳೂರು: ಸರ್ಕಾರಿ ಅಭಿವೃದ್ಧಿ ಕೆಲಸಗಳು ಹಾಗೂ ಸಾರ್ವಜನಿಕ ಸೇವೆಗಳು ಜನ ಸಾಮಾನ್ಯರಿಗೆ ತಲುಪಬೇಕಾದರೆ ಅಧಿಕಾರಿಗಳು ಮತ್ತು ನೌಕರರು ತಮ್ಮ ಕಾರ್ಯಕ್ಷೇತ್ರ (ಕೇಂದ್ರಸ್ಥಾನ)ದಲ್ಲಿಯೇ ನೆಲೆಸಿರಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರು ಕಡ್ಡಾಯವಾಗಿ ನಿಯೋಜಿತ ಕೇಂದ್ರಸ್ಥಾನದಲ್ಲೇ ವಾಸವಿರುವುದನ್ನು ಖಾತ್ರಿಪಡಿಸಿಕೊಳ್ಳಲು ಕರ್ನಾಟಕ ಸರ್ಕಾರ ಈಗ ಜಿಯೋ-ಫೆನ್ಸಿಂಗ್ (Geo-Fencing) ತಂತ್ರಜ್ಞಾನ ಆಧಾರಿತ ‘ಕರ್ತವ್ಯ’ (Kartavya) ಆ್ಯಪ್ ಮೂಲಕ ರಾತ್ರಿ ವೇಳೆಯ ಹಾಜರಾತಿ ದಾಖಲಿಸುವುದನ್ನು ಕಡ್ಡಾಯಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.
ಆರಂಭಿಕ ಪ್ರಾಯೋಗಿಕ ಅನುಷ್ಠಾನ
ಈ ಸಂಬಂಧ ಮೊದಲ ಹಂತವಾಗಿ, 2026 ನೇ ನವೆಂಬರ್ 01 ರಿಂದ ಜಾರಿಗೆ ಬರುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಲ್ಲೂಕು ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (PHC) ಕರ್ತವ್ಯ ನಿರ್ವಹಿಸುವ ಎಲ್ಲಾ ವೈದ್ಯರಿಗೆ ಈ ರಾತ್ರಿ ಹಾಜರಾತಿಯನ್ನು ಕಡ್ಡಾಯಗೊಳಿಸಲಾಗಿದೆ. ಪ್ರತಿದಿನ ರಾತ್ರಿ 9.00 ಗಂಟೆಯ ನಂತರ, ವೈದ್ಯರು ತಮ್ಮ ಕೇಂದ್ರಸ್ಥಾನವಿರುವ ನಗರ, ಪಟ್ಟಣ ಅಥವಾ ಗ್ರಾಮದ ಭೌಗೋಳಿಕ ವ್ಯಾಪ್ತಿಯೊಳಗಿದ್ದುಕೊಂಡೇ ‘ಕರ್ತವ್ಯ’ ಆ್ಯಪ್ ಮೂಲಕ ಹಾಜರಾತಿಯನ್ನು ನಮೂದಿಸಬೇಕು.
ಯಾರಿಗೆ ವಿನಾಯಿತಿ?
ಮಂಜೂರಾದ ರಜೆಯಲ್ಲಿರುವ ಅಧಿಕಾರಿ / ಸಿಬ್ಬಂದಿಗಳು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಕೇಂದ್ರಸ್ಥಾನದಿಂದ ಹೊರಗೆ ಅಧಿಕೃತ ಕರ್ತವ್ಯದಲ್ಲಿರುವ ಅಧಿಕಾರಿ / ಸಿಬ್ಬಂದಿಗಳು ಮತ್ತು
ಕೇಂದ್ರಸ್ಥಾನ ಬಿಡಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿರುವ ಅಧಿಕಾರಿ / ಸಿಬ್ಬಂದಿಗಳಿಗೆ ವಿನಾಯಿತಿ ಇರುತ್ತದೆ. ಈ ಸಂಬಂದ ಸದರಿ ರಜೆ ಅಥವಾ ಅನುಮತಿ ಬಗ್ಗೆ ಕಾರಣಗಳನ್ನು ಆ್ಯಪ್ನಲ್ಲಿ ಸ್ಪಷ್ಟವಾಗಿ ದಾಖಲಿಸಬೇಕಾಗುತ್ತದೆ.
ಕಟ್ಟುನಿಟ್ಟಿನ ಮೇಲ್ವಿಚಾರಣೆ ಹಾಗೂ ಕ್ರಮ
ಆಯುಕ್ತರು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಪ್ರತಿ ತಿಂಗಳು ರಾತ್ರಿ ಹಾಜರಾತಿ ವರದಿಗಳನ್ನು ಕಡ್ಡಾಯವಾಗಿ ಪರಿಶೀಲಿಸಲಿದ್ದಾರೆ. ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಕೇಂದ್ರಸ್ಥಾನದಲ್ಲಿ ವಾಸವಿರದ ಅಧಿಕಾರಿಗಳ ವಿರುದ್ಧ ನಾಗರಿಕ ಸೇವಾ ನಿಯಮಗಳಡಿ ಕಟ್ಟುನಿಟ್ಟಿನ ಶಿಸ್ತುಕ್ರಮ ಜರುಗಿಸಲಾಗುವುದು.
ರಾತ್ರಿ ಹಾಜರಾತಿ ಕಡ್ಡಾಯ ಕಾರಣವೇನು?
ಮಾನ್ಯ ಉಪಲೋಕಾಯುಕ್ತರ ವಿಚಾರಣೆ ವೇಳೆ ಹಲವು ನೌಕರರು ತಮ್ಮ ನಿಯೋಜಿತ ಕೇಂದ್ರಸ್ಥಾನದಲ್ಲಿ ವಾಸವಿರದೆ ದೂರದ ಊರುಗಳಿಂದ ಆಡಳಿತ ನಡೆಸುತ್ತಿದ್ದು, ಇದರಿಂದ ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಹಾಜರಾಗದೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿರುವುದು ಕಂಡುಬಂದಿತ್ತು. ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಸೇವಾ ನಿಯಮಗಳ ಪಾಲನೆಗಾಗಿ ಮಾನ್ಯ ಮುಖ್ಯಮಂತ್ರಿಗಳ ಅನುಮೋದನೆಯೊಂದಿಗೆ ಪ್ರಜಾ ಸೇವಾ ಇಲಾಖೆಯು ಈ ನೂತನ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಮುಂದಿನ ದಿನಗಳಲ್ಲಿ ಈ ಪ್ರಾಯೋಗಿಕ ಯೋಜನೆಯ ಫಲಿತಾಂಶದ ಆಧಾರದ ಮೇಲೆ, ಸರ್ಕಾರದ ಇತರ ಇಲಾಖೆಗಳು ಹಾಗೂ ವೃಂದಗಳ ನೌಕರರಿಗೂ ‘ಕರ್ತವ್ಯ’ ಆ್ಯಪ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು ಎಂದು ಪ್ರಜಾ ಸೇವೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಆದೇಶ ಹೊರಡಿಸಿದ್ದಾರೆ.
