ಮಂಗಳೂರು: ಮಂಗಳೂರಿನ ಚರ್ಚ್ನ ಫಾದರ್ ಸಿಪ್ರಿಯನ್ ಪಿಂಟೋ ವಿರುದ್ಧ ಅಪ್ರಾಪ್ತ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಪೋಕ್ಸೊ ಕಾಯ್ದೆಯಡಿ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಾರ್ಥನೆಗಾಗಿ ಚರ್ಚ್ಗೆ ಬರುತ್ತಿದ್ದ ಬಾಲಕನಿಗೆ ಚಾಕಲೇಟ್ ನೀಡಿ ಪುಸಲಾಯಿಸಿ, ಚರ್ಚ್ನ ಕೊಠಡಿಯೊಂದಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೂರಿನ ಪ್ರಕಾರ ಆಗಸ್ಟ್ 14ರಂದು ಸಂಜೆ ಸುಮಾರು 6.30ರ ವೇಳೆಗೆ ಪ್ರಾರ್ಥನೆಗಾಗಿ ಚರ್ಚ್ಗೆ ತೆರಳಿದ್ದ ಬಾಲಕನನ್ನು ರಿಸೆಪ್ಷನಿಸ್ಟ್ ಕೊಠಡಿಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಇದಕ್ಕೂ ಮುನ್ನವೂ ಬಾಲಕನನ್ನು ಪುಸಲಾಯಿಸಿ ಅನುಚಿತವಾಗಿ ವರ್ತಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಘಟನೆಯಿಂದ ಆಘಾತಕ್ಕೊಳಗಾದ ಬಾಲಕ ತನ್ನ ಅನುಭವವನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ.

ಈ ವೇಳೆ ಇತರ ಬಾಲಕರಿಗೂ ಇದೇ ರೀತಿಯ ಕಿರುಕುಳ ನೀಡಲಾಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಬಾಲಕ ತನ್ನ ಪೋಷಕರಿಗೆ ನಡೆದ ಘಟನೆಯನ್ನು ವಿವರಿಸಿದ್ದಾನೆ. ಮಗನಿಂದ ವಿಚಾರ ತಿಳಿದ ಪೋಷಕರು ಆತಂಕಗೊಂಡು ಮಂಗಳೂರಿನ ಬಿಷಪ್ ಅವರ ಗಮನಕ್ಕೆ ತಂದಿದ್ದಾರೆ. ಬಿಷಪ್ ಅವರ ಸೂಚನೆಯಂತೆ ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ಮಕ್ಕಳ ಹಕ್ಕುಗಳ ರಕ್ಷಣಾ ಇಲಾಖೆಗೆ ದೂರು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಪೋಷಕರು ಮಕ್ಕಳ ಹಕ್ಕುಗಳ ರಕ್ಷಣಾ ಇಲಾಖೆಗೆ ಇ-ಮೇಲ್ ಮೂಲಕ ದೂರು ನೀಡಿದ್ದರು ಎನ್ನಲಾಗಿದೆ. ಈ ವಿಚಾರ ಮೈಸೂರಿನ ಮಕ್ಕಳ ಹಕ್ಕುಗಳ ಪರ ಕೆಲಸ ಮಾಡುವ ಒಡನಾಡಿ ಸಂಸ್ಥೆಯ ಗಮನಕ್ಕೂ ಬಂದಿತ್ತು. ಬಳಿಕ ಸಂಸ್ಥೆಯು ಮಂಗಳೂರು ಪೊಲೀಸ್ ಕಮಿಷನರ್ಗೆ ಪತ್ರ ಬರೆದು ಕ್ರಮಕ್ಕೆ ಮನವಿ ಮಾಡಿತ್ತು ಎಂದು ತಿಳಿದುಬಂದಿದೆ.

ಇದರ ಬೆನ್ನಲ್ಲೇ ಪೊಲೀಸರು ಸಂತ್ರಸ್ತ ಬಾಲಕನನ್ನು ಪತ್ತೆಹಚ್ಚಿ ದೂರು ಸ್ವೀಕರಿಸಿದ್ದು, ಪೋಕ್ಸೊ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಆರೋಪಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪ ಗಂಭೀರ ಚರ್ಚೆಗೆ ಕಾರಣವಾಗಿದ್ದು, ತನಿಖೆಯ ಬಳಿಕವಷ್ಟೇ ಘಟನೆಯ ಸಂಪೂರ್ಣ ಸತ್ಯಾಂಶ ಹೊರಬರಬೇಕಿದೆ.
