Home ಕರಾವಳಿದೈವಸ್ಥಾನದ ಎದುರು ದಫನ ಭೂಮಿ ನಿರ್ಮಾಣಕ್ಕೆ ವಿರೋಧ: ಸೋಮವಾರ ಮೂಡುಶೆಡ್ಡೆ ಚಲೋ!

ದೈವಸ್ಥಾನದ ಎದುರು ದಫನ ಭೂಮಿ ನಿರ್ಮಾಣಕ್ಕೆ ವಿರೋಧ: ಸೋಮವಾರ ಮೂಡುಶೆಡ್ಡೆ ಚಲೋ!

by diksoochikannada.com

ಮಂಗಳೂರು: ನಗರದ ಹೊರವಲಯದ ಮೂಡುಶೆಡ್ಡೆ ಗ್ರಾಮದಲ್ಲಿ ಹಿಂದೂ ದೈವಸ್ಥಾನ, ನಾಗಬನ ಹಾಗೂ ಜೈನ ಬಸದಿಯ ಸಮೀಪ ಮುಸ್ಲಿಂ ದಫನ ಭೂಮಿ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿರುವ ವಿಚಾರ ವಿವಾದಕ್ಕೆ ಕಾರಣವಾಗಿದೆ. ಎರಡು ಎಕರೆ ಜಾಗದಲ್ಲಿ ಖಬರಿಸ್ತಾನ ನಿರ್ಮಾಣಕ್ಕೆ ಮುಂದಾಗಿರುವುದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದು, ಹಿಂದೂ ಸಂಘಟನೆಗಳು ಸರ್ಕಾರದ ನಿರ್ಧಾರವನ್ನು ಖಂಡಿಸಿವೆ. ಆದರೆ 1992ರಲ್ಲೇ ಮಸೀದಿಯ ಹೆಸರಿಗೆ ಜಾಗ ಮಂಜೂರಾಗಿತ್ತು ಎಂದು ಮಸೀದಿ ಆಡಳಿತ ಸ್ಪಷ್ಟನೆ ನೀಡಿದೆ.

ದೈವಸ್ಥಾನದ ಎದುರೇ ದಫನ ಭೂಮಿ ನಿರ್ಮಾಣಕ್ಕೆ ವಿರೋಧ!

ಮಂಗಳೂರು ತಾಲೂಕಿನ ಮೂಡುಶೆಡ್ಡೆ ಗ್ರಾಮದ ಸರ್ವೇ ನಂಬರ್ 74ರಲ್ಲಿ ಎರಡು ಎಕರೆ ಜಾಗವನ್ನು ಹಯತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸಕ್ಕೆ ದಫನ ಭೂಮಿಗಾಗಿ ಮಂಜೂರು ಮಾಡಲಾಗಿದೆ. ಮಂಗಳೂರು ತಹಶೀಲ್ದಾರ್ ಅವರ ಆದೇಶದಂತೆ ಜಾಗ ಮಂಜೂರಾಗಿದ್ದು, ಸದ್ಯ ಅಲ್ಲಿ ದಫನ ಭೂಮಿ ನಿರ್ಮಾಣಕ್ಕಾಗಿ ಮಣ್ಣು ಅಗೆಯುವ ಕಾರ್ಯ ನಡೆಯುತ್ತಿದೆ. ಈ ಜಾಗದ ಎದುರಲ್ಲೇ ಗ್ರಾಮದ ಜಾರಂದಾಯ ದೈವದ ಧರ್ಮಚಾವಡಿ ಇದ್ದು, ಸಮೀಪದಲ್ಲೇ ನಾಗಬನ ಹಾಗೂ ಜೈನ ಬಸದಿ ಕೂಡ ಇದೆ. ಹೀಗಾಗಿ ಧಾರ್ಮಿಕ ಆರಾಧನಾ ಸ್ಥಳಗಳ ಸಮೀಪ ಖಬರಿಸ್ತಾನ ನಿರ್ಮಿಸುವುದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಜಾಗದಲ್ಲಿ ಮಂಜೂರು?

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಹೆಸರಿನಲ್ಲಿ ಸುಮಾರು 300 ಎಕರೆ ಜಾಗ ಮೀಸಲಿಟ್ಟಿದ್ದು, ಈ ಪೈಕಿ ಎರಡು ಎಕರೆ ಜಾಗವನ್ನು ಮುಸ್ಲಿಂ ದಫನ ಭೂಮಿಗಾಗಿ ಮೀಸಲಿಡಲಾಗಿದೆ ಎಂದು ಮಸೀದಿ ಕಮಿಟಿ ಹೇಳಿದೆ. ಮಸೀದಿಯಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಈ ಜಾಗದಲ್ಲಿ ದಫನ ಭೂಮಿ ನಿರ್ಮಾಣಕ್ಕೆ ಮುಂದಾಗಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ದೈವಸ್ಥಾನ ಮತ್ತು ನಾಗಬನದ ಸಮೀಪ ದಫನ ಭೂಮಿ ನಿರ್ಮಾಣ ಮಾಡುವುದರಿಂದ ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟಾಗಲಿದೆ ಎಂಬುದು ವಿರೋಧ ವ್ಯಕ್ತಪಡಿಸುತ್ತಿರುವವರ ವಾದ. ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶದಲ್ಲಿ ಉದ್ದೇಶಪೂರ್ವಕವಾಗಿ ದಫನ ಭೂಮಿ ನಿರ್ಮಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ಮೂಡುಶೆಡ್ಡೆ ಚಲೋಗೆ ಹಿಂದೂ ಸಂಘಟನೆಗಳ ಕರೆ

ದಫನ ಭೂಮಿ ನಿರ್ಮಾಣಕ್ಕೆ ಸರ್ಕಾರ ಅವಕಾಶ ನೀಡಿರುವುದನ್ನು ಖಂಡಿಸಿರುವ ಹಿಂದೂ ಸಂಘಟನೆಗಳು, ಇದರ ವಿರುದ್ಧ ಮೂಡುಶೆಡ್ಡೆ ಚಲೋಗೆ ಕರೆ ನೀಡಿವೆ. ದಫನ ಭೂಮಿಯಲ್ಲಿ ಮೃತದೇಹಗಳನ್ನು ಹೂಳುವುದರಿಂದ ದೈವಗಳ ಆರಾಧನೆಗೆ ಧಕ್ಕೆ ಉಂಟಾಗಲಿದೆ ಎಂದು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಈ ಬೆಳವಣಿಗೆಯಿಂದ ಮೂಡುಶೆಡ್ಡೆಯಲ್ಲಿ ದೈವಸ್ಥಾನ ಮತ್ತು ಖಬರಿಸ್ತಾನಕ್ಕೆ ಸಂಬಂಧಿಸಿದ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ.

1992ರಲ್ಲೇ ಜಾಗ ಮಂಜೂರಾಗಿದೆ: ಮಸೀದಿ ಆಡಳಿತ

ಇನ್ನೊಂದೆಡೆ ದಫನ ಭೂಮಿ ವಿಚಾರವಾಗಿ ಮಸೀದಿ ಆಡಳಿತ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಹಯತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷ ಸೈಫುದ್ದೀನ್ ಮಾತನಾಡಿ, ದಫನ ಭೂಮಿಯ ಜಾಗ 1992ರಲ್ಲೇ ಮಸೀದಿಯ ಹೆಸರಿಗೆ ಮಂಜೂರಾಗಿತ್ತು ಎಂದು ತಿಳಿಸಿದ್ದಾರೆ. 1993ರಲ್ಲಿ ಜಾಗದ ಆರ್‌ಟಿಸಿ ದಾಖಲೆ ಮಾಡಲಾಗಿದ್ದು, ವಕ್ಫ್ ರಿಜಿಸ್ಟರ್‌ನಲ್ಲಿಯೂ ನೋಂದಣಿಯಾಗಿದೆ. ಬಳಿಕ ಪಿಲಿಕುಳದವರು ಆ ಜಾಗವನ್ನು ಸ್ವಾಧೀನಪಡಿಸಿಕೊಂಡಿದ್ದರು. ನಂತರ ಮಸೀದಿ ಆಡಳಿತ ನಡೆಸಿದ ಹೋರಾಟದ ಫಲವಾಗಿ ಮತ್ತೆ ಎರಡು ಎಕರೆ ಜಾಗ ದೊರೆತಿದೆ ಎಂದು ಅವರು ಹೇಳಿದ್ದಾರೆ. ದಫನ ಭೂಮಿ ನಿರ್ಮಾಣದಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ ಇದರಿಂದ ಯಾವುದೇ ಹಿಂದೂ ಬಾಂಧವರಿಗೆ ಸಮಸ್ಯೆಯಾಗುವುದಿಲ್ಲ. ಎಲ್ಲರೂ ಸೌಹಾರ್ದದಿಂದ ಇರಬೇಕು ಎಂದಿದ್ದಾರೆ. ಮಸೀದಿ ಮತ್ತು ದೇವಸ್ಥಾನಗಳ ನಡುವಿನ ಅಂತರಕ್ಕೆ ಸಂಬಂಧಿಸಿದ ಕಾನೂನು ನಿಯಮಗಳನ್ನೂ ಅವರು ಉಲ್ಲೇಖಿಸಿದ್ದು, ಈ ವಿಚಾರದಲ್ಲಿ ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ಉಂಟಾಗುತ್ತಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

You may also like

Leave a Reply