Home ಕರಾವಳಿಬಂಟ್ವಾಳ ರೆಹಮಾನ್ ಹತ್ಯೆ ಆರೋಪಿಗಳ ಜಾಮೀನಿಗೆ ಹೈಕೋರ್ಟ್ ತಡೆ: ಜಾಮೀನು ರದ್ದತಿಗೆ ಹೈಕೋರ್ಟ್ ಮೆಟ್ಟಿಲೇರಿದ್ದ ಸರ್ಕಾರ!

ಬಂಟ್ವಾಳ ರೆಹಮಾನ್ ಹತ್ಯೆ ಆರೋಪಿಗಳ ಜಾಮೀನಿಗೆ ಹೈಕೋರ್ಟ್ ತಡೆ: ಜಾಮೀನು ರದ್ದತಿಗೆ ಹೈಕೋರ್ಟ್ ಮೆಟ್ಟಿಲೇರಿದ್ದ ಸರ್ಕಾರ!

by diksoochikannada.com

ಮಂಗಳೂರು: ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣದಲ್ಲಿ ಎಂಟು ಆರೋಪಿಗಳಿಗೆ ಮೈಸೂರು ಕೋಕಾ ವಿಶೇಷ ನ್ಯಾಯಾಲಯ ನೀಡಿದ್ದ ಜಾಮೀನು ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಜಾಮೀನು ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ನ್ಯಾಯಪೀಠ, ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿದೆ.

ಭರತ್ ಕುಮ್ಡೇಲು, ಪ್ರದೀಪ್, ರಂಜಿತ್, ಶಿವಪ್ರಸಾದ್, ಅಭಿನ್ ರೈ, ಸಾಹಿತ್, ಸಚಿನ್ ಹಾಗೂ ತೇಜಾಕ್ಷ ಅವರಿಗೆ ಜಾಮೀನು ನೀಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.

ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೋಕಾ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರೂ, ಕಾಯ್ದೆ ಹೇರಿಕೆಯಲ್ಲಿ ಹಲವು ಲೋಪಗಳಿರುವುದನ್ನು ಉಲ್ಲೇಖಿಸಿ ಮೈಸೂರಿನ ಕೋಕಾ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತ್ತು. ಜಾಮೀನು ರದ್ದುಪಡಿಸಿ ಆರೋಪಿಗಳನ್ನು ಮತ್ತೆ ಬಂಧನಕ್ಕೆ ಒಳಪಡಿಸಲು ಆದೇಶಿಸುವಂತೆ ಸರ್ಕಾರ ಅರ್ಜಿಯಲ್ಲಿ ಕೋರಿತ್ತು.

ಆರೋಪಿಗಳಿಗೆ ಜಾಮೀನು ಮಂಜೂರಾದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕಾಂಗ್ರೆಸ್ ವಿರುದ್ಧವೂ ಟೀಕೆಗಳು ಕೇಳಿಬಂದಿದ್ದವು. ಮಂಗಳೂರಿನಲ್ಲಿ ಮುಖ್ಯಮಂತ್ರಿ ಭೇಟಿ ಸಂದರ್ಭದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತರು ಕಪ್ಪು ಪಟ್ಟಿ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೇ ಆರೋಪಿಗಳ ಪೈಕಿ ಆರು ಮಂದಿಯ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾಡಳಿತ ಗೂಂಡಾ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಂಡಿತ್ತು.

2025ರ ಮೇ 27ರಂದು ಹತ್ಯೆ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರಿನಲ್ಲಿ 2025ರ ಮೇ 27ರಂದು ಅಬ್ದುಲ್ ರೆಹಮಾನ್ ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯನ್ನೂ ಅನ್ವಯಿಸಲಾಗಿತ್ತು. ಸದ್ಯ ಆರೋಪಿಗಳಿಗೆ ನೀಡಲಾಗಿದ್ದ ಜಾಮೀನು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿರುವುದರಿಂದ ಪ್ರಕರಣದ ಮುಂದಿನ ವಿಚಾರಣೆ ಮಹತ್ವ ಪಡೆದುಕೊಂಡಿದೆ.

You may also like

Leave a Reply