ಬಂಟ್ವಾಳ: ಪ್ರಿಯತಮೆಯ ಕೊಲೆಗೆ ಯತ್ನಿಸಿದ ಪ್ರಿಯಕರ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾರಿಪಳ್ಳ ಎಂಬಲ್ಲಿ ನಡೆದಿದೆ.

ಮೃತನನ್ನು ಕೊಡ್ಮಾಣ್ ನಿವಾಸಿ ಸುದೀರ್ (30) ಎಂದು ಗುರುತಿಸಲಾಗಿದೆ. ಗಾಯಗೊಂಡ ಯುವತಿಯನ್ನು ಫರಂಗಿಪೇಟೆ ನಿವಾಸಿ ಕುಮಾರಿ ದಿವ್ಯಾ ಯಾನೆ ದೀಕ್ಷಿತಾ (26) ಎಂದು ಗುರುತಿಸಲಾಗಿದೆ. ಈ ಜೋಡಿ ಕಳೆದ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರೆನ್ನಲಾಗಿದೆ. ಆದರೆ ಇತ್ತೀಚಿನ ತಿಂಗಳುಗಳಿಂದ ಇವರ ನಡುವೆ ಮನಸ್ತಾಪ ಉಂಟಾಗಿತ್ತು. ಆದರೂ ಸುಧೀರ್, ದಿವ್ಯಾಳಿಗೆ ಫೋನ್ ಮಾಡುವುದು ಹಾಗೂ ಹಿಂಬಾಲಿಸುವ ಕೆಲಸವನ್ನು ಮುಂದುವರಿಸಿದ್ದ. ಇಂದೂ ಸಹ ದಿವ್ಯಾಳ ಬಾಡಿಗೆ ಮನೆ ಬಳಿ ಬಂದು ಮದುವೆಯಾಗುವಂತೆ ಒತ್ತಾಯಿಸಿದ್ದ. ಇದರಿಂದಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಸಂಭವಿಸಿದೆ.

ಈ ವೇಳೆ ಸುದೀರ್ ತಾನು ತಂದಿದ್ದ ಚಾಕುವಿನಿಂದ ದಿವ್ಯಾಳಿಗೆ ಚುಚ್ಚಿ ಗಾಯಗೊಳಿಸಿದ್ದಾನೆ. ಆಕೆಯು ತಪ್ಪಿಸಿಕೊಂಡು ಓಡಿದಾಗ ಮೂರ್ಛೆಹೋಗಿ ಬಿದ್ದಿದ್ದಾಳೆ. ದಿವ್ಯಾ ಮೃತಪಟ್ಟಿರಬಹುದು ಎಂದು ಆತಂಕಕ್ಕೆ ಒಳಗಾದ ಸುದೀರ್, ಆಕೆಯ ಮನೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆಯ ಬಳಿಕ ದಿವ್ಯಾಳನ್ನು ಆಕೆಯ ಮನೆಯವರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.