ಬೆಳ್ತಂಗಡಿ: ದಿನಸಿ ಸಾಲ ವಾಪಸ್ ಕೇಳಿದ್ದಕ್ಕೆ ಅಂಗಡಿಗೆ ಬೆಂಕಿ ಹಚ್ಚಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ನಡೆದಿದ್ದು, ಈ ಸಂಬಂಧ ಬೆಳ್ತಂಗಡಿ ಪೊಲೀಸರು ಆರೋಪಿ ಉಮೇಶ್ ಬಂಗೇರಾನನ್ನು ಬಂಧಿಸಿದ್ದಾರೆ.

ಆರೋಪಿ ಉಮೇಶ್ ಬಂಗೇರಾ ಹಿಂದಿನಿಂದ ಹೊಟೇಲ್ ವ್ಯವಹಾರ ನಡೆಸುತ್ತಿದ್ದ. ಈ ವೇಳೆ ಸದಕತುಲ್ಲಾ ಎಂಬಾತನ ದಿನಸಿ ಅಂಗಡಿಯಿಂದ ಸುಮಾರು 38,000 ರೂಪಾಯಿ ಮೌಲ್ಯದ ದಿನಸಿ ಸಾಮಾನುಗಳನ್ನು ಸಾಲಕ್ಕೆ ತೆಗೆದುಕೊಂಡಿದ್ದರು.

ಇತ್ತೀಚೆಗೆ ಅಂಗಡಿ ಮಾಲೀಕ ಸದಕತುಲ್ಲಾ, ಹಳೆಯ ಸಾಲ ತೀರಿಸುವಂತೆ ಕರೆ ಮಾಡಿ ಒತ್ತಡ ಹಾಕಿದ್ದರಿಂದ ಕೋಪಗೊಂಡ ಉಮೇಶ್, ಅಂಗಡಿಗೆ ತೆರಳಿ ಅಂಗಡಿಯ ಮುಂಭಾಗದಲ್ಲಿ ಹಾಕಿದ್ದ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ್ದಾನೆ.

ಇದರಿಂದ ಅಂಗಡಿಗೆ ₹3,000 ರೂ ನಷ್ಟ ಉಂಟಾಗಿದೆ ಎಂದು ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ಬೆಂಕಿ ಹಚ್ಚಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆಧಾರದ ಮೇಲೆ ಉಮೇಶ್ ನನ್ನ ಬಂಧಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.