ಮಂಗಳೂರು: ಮಂಗಳೂರು ಕೇಂದ್ರ ಕಾರಾಗೃಹದಲ್ಲಿ ಮತ್ತೊಂದು ಗಂಭೀರ ಅಕ್ರಮ ಚಟುವಟಿಕೆ ಬೆಳಕಿಗೆ ಬಂದಿದೆ. ಖೈದಿಯೊಬ್ಬನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಹಣದ ವಸೂಲಿ ಮಾಡಲಾಗಿದ್ದು, ಕ್ರಿಮಿನಲ್‌ಗಳಿಗೆ ಈ ಜೈಲು ಅಕ್ಷರಶಃ ‘ಸ್ವರ್ಗ’ವಾಯಿತಾ ಎಂಬ ಅನುಮಾನ ಮೂಡುತ್ತಿದೆ.

ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಮಿಥುನ್ ಎಂಬಾತನನ್ನು ಜೈಲಿನ ಕೋಣೆ ಸಂಖ್ಯೆ 5ರಲ್ಲಿ ಬಂಧಿಸಲಾಗಿತ್ತು. ಈ ವೇಳೆ ವಿಚಾರಣಾಧೀನ ಖೈದಿಗಳಾದ ಧನುಷ್ ಭಂಡಾರಿ, ಸಚಿನ್ ತಲಪಾಡಿ, ದೀಲೇಶ್ ಹಾಗೂ ಲಾಯಿ ವೇಗಸ್ ಎಂಬವರು ಮಿಥುನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

50 ಸಾವಿರ ನೀಡದಿದ್ದರೆ ಕೊಂದು ಹಾಕುತ್ತೇನೆ ಎಂಬ ಬೆದರಿಕೆ!
ಈ ತಂಡ 50 ಸಾವಿರ ನೀಡದಿದ್ದರೆ ಜೀವ ತೆಗೆಯುವ ಬೆದರಿಕೆ ನೀಡಿದ್ದು, ಭಯಗೊಂಡ ಮಿಥುನ್, ಜೈಲಿನ ಇನ್ನೊಂದು ಖೈದಿಯ ಮೊಬೈಲ್ ಬಳಸಿ ಪತ್ನಿಗೆ ಕರೆ ಮಾಡಿ ಹಣ ಕೇಳಿದ್ದ. ಪತ್ನಿ ಸಚಿನ್ ನೀಡಿದ ಎರಡು ಗೂಗಲ್ ಪೇ ನಂಬರ್‌ಗಳಿಗೆ ತಲಾ 10 ಸಾವಿರದಂತೆ 20 ಸಾವಿರ ಹಣ ಪಾವತಿಸಿದ್ದಾಳೆ. ಈ ಘಟನೆ ಜುಲೈ 12ರಂದು ಸಹಾಯಕ ಪೊಲೀಸ್ ಆಯುಕ್ತರು ಜೈಲು ಪರಿಶೀಲನೆಗೆ ಬಂದಾಗ ಬೆಳಕಿಗೆ ಬಂದಿದೆ. ಬಳಿಕ ಧನುಷ್, ಸಚಿನ್, ದೀಲೇಶ್, ಲಾಯಿ ವೇಗಸ್ ವಿರುದ್ಧ ಮಂಗಳೂರು ಬರ್ಕೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.


ಜೈಲಿನೊಳಗೆ ಹಲ್ಲೆ, ಹೊರಗಿನವರ ಹಣ!
ಮಿಥುನ್ ಮೇಲೆ ಹಲ್ಲೆಗೆ ಜೈಲಿನ ಹೊರಗಿನ ವ್ಯಕ್ತಿಗಳು ಆದೇಶ ನೀಡಿರುವ ಶಂಕೆಯೂ ವ್ಯಕ್ತವಾಗಿದೆ. 2015ರ ನವೆಂಬರ್ 2ರಂದು ಜೈಲಿನಲ್ಲೇ ಭೂಗತ ಪಾತಕಿ ದಾವೂದ್ ಸಹಚರ ಮಾಡೂರು ಯೂಸುಫ್ ಹಾಗೂ ಛೋಟಾ ಶಕೀಲ್ ಸಹಚರ ಗಣೇಶ್ ಶೆಟ್ಟಿಯನ್ನು ಹತ್ಯೆ ಮಾಡಲಾಗಿತ್ತು. ಇದು ಮಂಗಳೂರು ಜೈಲಿನ ಭದ್ರತೆಯಲ್ಲಿನ ಬೃಹತ್ ವೈಫಲ್ಯವನ್ನು ಎತ್ತಿ ತೋರಿಸಿತ್ತು. ಎ ಹಾಗೂ ಬಿ ಬ್ಯಾರೆಕ್‌ಗಳಲ್ಲಿ ಖೈದಿಗಳ ನಡುವೆ ಪ್ರತಿದಿನ ಸಂಘರ್ಷ ನಡೆಯುತ್ತಿದ್ದು, ಗಾಂಜಾ, ಮೊಬೈಲ್ ಅಕ್ರಮ ಸಾಗಾಟವೂ ನಡೆಯುತ್ತಿದೆ. ಇದಕ್ಕೆ ಕಾರಾಗೃಹ ಸಿಬ್ಬಂದಿಯೂ ಸಾಥ್ ನೀಡುತ್ತಿರುವ ಅನುಮಾನಗಳು ಗಂಭೀರ ರೂಪ ಪಡೆದುಕೊಂಡಿವೆ.