ಮಂಗಳೂರು: ಹೆಂಡತಿ ಜೊತೆ ನಡೆದ ಜಗಳದ ಹಿನ್ನಲೆಯಲ್ಲಿ ನಾಲ್ಕು ವರ್ಷದ ಮಗಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯೊಬ್ಬನನ್ನು ಮಂಗಳೂರಿನ ಪಣಂಬೂರು ಪೊಲೀಸರು ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ. ಈ ಘಟನೆಯಲ್ಲಿ ಪೊಲೀಸರು ಮೆರೆದ ಕಾರ್ಯಚುರುಕಿಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಮಂಗಳೂರು ನಗರದ ಹೊರವಲಯದ ಕಾವೂರಿನಲ್ಲಿ ವಾಸಿಸುವ ರಾಜೇಶ್ ಅಲಿಯಾಸ್ ಸಂತು (35) ಎಂಬಾತ ತನ್ನ ನಾಲ್ಕು ವರ್ಷದ ಮಗಳೊಂದಿಗೆ ಸಾಯಲು ಯತ್ನಿಸಿದ್ದಾನೆ. ಬಜ್ಜೆಯ ಯುವತಿಯನ್ನು ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದ ರಾಜೇಶ್‌ಗೆ ಒಂದು ಮಗು ಇದೆ. ಕಳೆದ ಕೆಲವು ದಿನಗಳಿಂದ ದಾಂಪತ್ಯದಲ್ಲಿ ಕಲಹ ಮುಂದುವರಿದಿದ್ದು, ಪತ್ನಿ ಸರಿಯಲ್ಲ ಎಂಬ ಅಸಮಾಧಾನದಿಂದ ಆತ ನಿರಾಶನಾಗಿದ್ದಾನೆ.
ವಿಡಿಯೋ ಮಾಡಿ ವಾಟ್ಸಪ್‌ಗೆ ಹಾಕಿದ ತಂದೆ!
ರಾಜೇಶ್ ತಣ್ಣೀರುಬಾವಿ ಬೀಚ್ ಬಳಿ “ನಾವು ಸಾಯೋಣ ಮಗಳೇ… ನಿನ್ನ ತಾಯಿ ಸರಿ ಇಲ್ಲ” ಎಂದು ಹೇಳುತ್ತಾ, ಸಮುದ್ರದತ್ತ ನಡೆದುಕೊಂಡು ಹೋಗುವ ದೃಶ್ಯವನ್ನು ವಿಡಿಯೋ ಮಾಡಿ ತನ್ನ ಅಕ್ಕ ಮತ್ತು ಇತರ ಬಂಧುಗಳಿಗೆ ವಾಟ್ಸಪ್ ಮೂಲಕ ಕಳುಹಿಸಿದ್ದ. ಆ ವಿಡಿಯೋ ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದು, ಸಂಜೆ ಏಳು ಗಂಟೆಯ ವೇಳೆಗೆ ಪಣಂಬೂರು ಪೊಲೀಸ್ ಠಾಣೆಗೆ ತಲುಪಿದೆ. ವಿಡಿಯೋದಲ್ಲಿ ವ್ಯಕ್ತಿಯ ಮುಖ ಸ್ಪಷ್ಟವಾಗಿರದ ಕಾರಣ, ಪಣಂಬೂರು ಠಾಣೆಯ ಇನ್ಸ್‌ಪೆಕ್ಟರ್ ಮಹಮ್ಮದ್ ಸಲೀಂ ಬೀಚ್ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾರೆ. ಬಳಿಕ ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿದಾಗ ಕಾವೂರು ಶಾಂತಿನಗರ ಪ್ರದೇಶ ತೋರಿಸಿದೆ. ಆ ಬಳಿಕ ಪಣಂಬೂರು ಠಾಣೆಯ ಫಕೀರಪ್ಪ, ಶರಣಪ್ಪ ಹಾಗೂ ರಾಕೇಶ್ ತಂಡ ಕಾವೂರಿಗೆ ಧಾವಿಸಿದ್ದು, ಮನೆ ಬಾಗಿಲು ಒಳಗಿನಿಂದ ಬಂದ್ ಮಾಡಿದ್ದರಿಂದ ಪೊಲೀಸರು ಬಾಗಿಲು ಒಡೆದು ಒಳ ಪ್ರವೇಶಿಸಿದ್ದಾರೆ. ಆ ಸಮಯದಲ್ಲಿ ರಾಜೇಶ್ ನೇಣು ಹಾಕಿಕೊಳ್ಳಲು ಸಿದ್ಧವಾಗಿದ್ದ ಎನ್ನಲಾಗಿದೆ. ಪಕ್ಕದಲ್ಲೇ ಮಗು ಕುಳಿತಿದ್ದು, ಪೊಲೀಸರು ತಕ್ಷಣ ಕಾರ್ಯನಿರ್ವಹಿಸಿ ಇಬ್ಬರನ್ನೂ ರಕ್ಷಿಸಿದ್ದಾರೆ. ಕೆಲವೇ ಕ್ಷಣಗಳ ವಿಳಂಬವಾದರೂ ತಂದೆ-ಮಗಳು ಇಬ್ಬರೂ ಪ್ರಾಣ ಕಳೆದುಕೊಳ್ಳುತ್ತಿದ್ದರು. ವಿಡಿಯೋದಲ್ಲಿ ಪುಟ್ಟ ಮಗಳು “ಸಾಯೋದು ಬೇಡಪ್ಪಾ” ಎಂದು ಹೇಳುತ್ತಿರುವ ದೃಶ್ಯ ಮನಕಲಕುವಂತಿದೆ.
