ಪುತ್ತೂರು: ವಿವಾದಾತ್ಮಕ ಹೇಳಿಕೆಯ ಆರೋಪ ಎದುರಿಸುತ್ತಿರುವ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಇಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದು, ಪುತ್ತೂರು ಪೊಲೀಸರ ನೊಟೀಸ್ ಹಿನ್ನೆಲೆಯಲ್ಲಿ ಠಾಣೆಗೆ ಆಗಮಿಸಿದ್ದಾರೆ.



ಪುತ್ತೂರು ಗ್ರಾಮಾಂತರ ಠಾಣೆಯ ತನಿಖಾಧಿಕಾರಿಯಿಂದ ನೀಡಲಾದ ನೋಟೀಸ್ ಹಿನ್ನೆಲೆಯಲ್ಲಿ ಕಲ್ಲಡ್ಕ ಭಟ್ ವಿಚಾರಣೆಗೆ ಹಾಜರಾಗಿದ್ದಾರೆ. ಈ ಪ್ರಕರಣದಲ್ಲಿ ಪುತ್ತೂರು ಕೋರ್ಟ್‌ನಲ್ಲಿ ಕಲ್ಕಡ್ಕ ಭಟ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದುವರಿದಿದೆ. ಕೋರ್ಟ್ ಅರ್ಜಿ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದ್ದು, ಆವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಪೊಲೀಸ್ ಇಲಾಖೆಗೆ ಸೂಚಿಸಿದೆ. ಅಕ್ಟೋಬರ್ 20ರಂದು ಪುತ್ತೂರು ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಧಾರ್ಮಿಕ ದ್ವೇಷ ಪ್ರಚೋದಿಸುವ ಹಾಗೂ ಮಹಿಳೆಯರ ಘನತೆಗೆ ಧಕ್ಕೆ ಉಂಟುಮಾಡುವ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಈಶ್ವರಿ ಪದ್ಮುಂಜ ಎಂಬವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಪುತ್ತೂರು ಗ್ರಾಮಾಂತರ ಠಾಣೆ ಅಧಿಕಾರಿಗಳು ಭಟ್ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ BNS 79, 196, 299, 302 ಹಾಗೂ 3(5) ಕಲಂಗಳಡಿ ಎಫ್ಐಆರ್ ದಾಖಲಿಸಿದ್ದರು.
ಅಕ್ಟೋಬರ್ 30ರಂದು BNS ಕಲಂ 35(3) ಅಡಿ ವಿಚಾರಣೆಗೆ ಹಾಜರಾಗುವಂತೆ ಕಲ್ಕಡ್ಕ ಪ್ರಭಾಕರ ಭಟ್ ಅವರಿಗೆ ಪೊಲೀಸರು ನೋಟೀಸ್ ನೀಡಿದ್ದರು. ಇದೇ ವೇಳೆ ಪೊಲೀಸರು ಕೋರ್ಟ್‌ಗೆ ಭಟ್ ಅವರ ನಿರೀಕ್ಷಣಾ ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿ, ಅವರನ್ನು ಬಂಧಿಸಲು ಕಾರಣ ನೀಡಿದ್ದರು. ಈ ಮಧ್ಯೆ ಇಂದು ಪ್ರಭಾಕರ ಭಟ್ ವಿಚಾರಣೆಗೆ ಹಾಜರಾಗಿದ್ದು, ಪೊಲೀಸರು ಹೇಳಿಕೆ ದಾಖಲಿಸಿ ಬಿಡುವ ಸಾಧ್ಯತೆ ಇದೆ.
